top of page
  • Writer's pictureAnoushka Dasgupta

ದಶಮಾನಗಳಿಂದ ಬೆಂಗಳೂರಿನ ನಗರದೃಶ್ಯ; ದುರಿತ ಕಾಲದಲ್ಲಿಯೂ ಹಾಗೂ ಉಚಿತ ಕಾಲದಲ್ಲಿಯೂ

Updated: Aug 15, 2022

ಕೈಗಾರಿಕೀಕರಣ ಮತ್ತು ಮಾಹಿತಿ ತಂತ್ರಜ್ಞಾನದ (ಐಟಿ ಬೂಮ್), ಬೆಂಗಳೂರನ್ನು 'ಭಾರತದ ಸಿಲಿಕಾನ್ ಕಣಿವೆ' (Indian silicon valley) ಸ್ಥಾನಕ್ಕೆ ತಂದಿದೆ, ಆದರೆ ಈ ದೊಡ್ಡ ಮಟ್ಟದ ಬಿರುದು ತನ್ನೊಂದಿಗೆ ಇಲ್ಲಿನ ನೈಸರ್ಗಿಕ ಭೂನಕ್ಷೆ ಗೆ ಭಾರಿ ಬದಲಾವಣೆಗಳನ್ನು ಹೊತ್ತು ತಂದಿದೆ. ಆದರೂ, ಈ ನಗರದ ನೈತಿಕತೆಯನ್ನು ಹಾಗೂ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಅಂದಿನಿಂದಲೂ ಜಾರಿಯಲ್ಲಿದೆ.


ಭಾರತದ ಉದ್ಯಾನ ನಗರಿ ಹಾಗೂ ಸಿಲಿಕಾನ್ ವ್ಯಾಲಿ ಎಂದು ಒಟ್ಟೊಟ್ಟಿಗೆ ಕರೆಯಲ್ಪಡುವ ನಗರ ನಮ್ಮ ಬೆಂಗಳೂರು. ಬೆಂಗಳೂರು ನಗರವು ಕೈಗಾರಿಕೀಕರಣದ ವಿಷಯದಲ್ಲಿ ಮಾತ್ರವಲ್ಲ, ಅದರ ಜೊತೆಗೆ ವನ್ಯಜೀವಿಗಳು ಹಾಗೂ ವಿವಿಧ ಸಂಸ್ಕೃತಿಗಳಲ್ಲಿ ಕೂಡ ಶ್ರೀಮಂತಿಕೆಯಿಂದ ಕೂಡಿದೆ ಎಂದು ಸಾಮಾನ್ಯವಾಗಿ ಜನರು ಭಾವಿಸುವುದು ಸಹಜ. ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಆಳಿದಂತಹ ದೊರೆ ಕೆಂಪೇಗೌಡರು ಆಧುನಿಕ ಬೆಂಗಳೂರಿನ ಅಡಿಪಾಯವನ್ನು ಹಾಕಿದಾಗಿನಿಂದ, ಈ ನಗರ, ತನ್ನದೇ ಶೈಲಿಯಲ್ಲಿ ವಿಕಸನ ಹೊಂದುತ್ತ ಬಂದಿದೆ. ಐತಿಹಾಸಿಕವಾಗಿ ನೋಡಿದಾಗ, ಬೆಂಗಳೂರು ನಗರ "ಒಡೆಯರ್ ರಾಜವಂಶ, ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್" ಅವರ ಸಾಮ್ರಾಜ್ಯಗಳ ಅಡಿಯಲ್ಲಿ ಅಭಿವೃದ್ಧಿ ಹೊಂದುತ್ತ ಬಂದಿತು. ನಂತರದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರಭಾವದಿಂದ ಬೆಳವಣಿಗೆ ಆಯಿತು. 1927 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ, ಬೆಂಗಳೂರು 'ಉದ್ಯಾನ ನಗರಿ' ಮತ್ತು 'ಕೆರೆಗಳ ನಗರ' ಎಂಬ ಖ್ಯಾತಿಯನ್ನು ಗಳಿಸಿತು, ಅಷ್ಟೇ ಅಲ್ಲದೇ ಹತ್ತಿರದ, ಅಕ್ಕಪಕ್ಕದ ರಾಜ್ಯಗಳಿಂದ ಹರಿದು ಬಂದ ವಲಸಿಗರನ್ನು ತೆರೆದ ಹಸ್ತಗಳಿಂದ ಸ್ವಾಗತಿಸುವ ನಗರವಾಗಿ ಅಭಿವೃದ್ಧಿ ಹೊಂದಿತು. ಈಗ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಬಲಿಷ್ಠ ಶಕ್ತಿಯಾಗಿ ಬೆಳೆದು ನಿಂತಿದೆ. ಆದಾಗ್ಯೂ, ಈ ಅದ್ಬುತ ಬೆಳವಣಿಗೆಯೊಂದಿಗೆ ಅದರ ಸಹಚರರಾಗಿ, ಒಂದು ನಾಣ್ಯದ ಎರಡು ಮುಖಗಳಂತೆ, ಒಳ್ಳೆಯದರ ಜೊತೆಯಲ್ಲಿ ರಾಹುಕಾಲ ಬರುವಂತೆಯೇ, ನಗರದ ನೈಸರ್ಗಿಕ ವಿದ್ಯಮಾನ ಹಾಗೂ ಜೀವ ವೈವಿಧ್ಯತೆಗೆ ಹಲವಾರು ಸಮಸ್ಯೆಗಳು ಬರುತ್ತದೆ.ಕಣ್ಮರೆಯಾಗುತ್ತಿರುವ ಸರೋವರಗಳ ಹಿಂದೆ ಅಡಗಿರುವ ರಹಸ್ಯ

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೆಲವು ದಶಕಗಳ ಹಿಂದೆ 837 ಕೆರೆಗಳಿದ್ದವು. ನಗರದಲ್ಲಿನ ಈ ಅಂತರ್‌ಸಂಪರ್ಕಿತ ಕೆರೆಗಳ ಜಾಲವು ನಗರವಾಸಿಗಳ ಜೀವನಾಡಿಯಾಗಿದೆ. ಐತಿಹಾಸಿಕವಾಗಿ, ಈ ಸರೋವರಗಳು ಸಂಪೂರ್ಣ ಬೆಂಗಳೂರಿಗೆ ಅಗತ್ಯವಾದ ಕುಡಿಯುವ ಉದ್ದೇಶಗಳಿಗಾಗಿ ನೀರನ್ನು ಒದಗಿಸುವುದು ಮಾತ್ರವಲ್ಲದೆ, ನಿರ್ದಿಷ್ಟವಾದ ನೀರಿನ ಮೂಲಗಳನ್ನೇ ಹೊಂದಿರದ ಭೂಮಿಗಳಲ್ಲಿ ನೀರಾವರಿ ಮತ್ತು ಮೀನುಗಾರಿಕೆಗೆ ನೀರಿನ ಸಮೃದ್ಧ ಮೂಲವಾಗಿತ್ತು. ನಂತರದಲ್ಲಿ ಈ ಕೆರೆಗಳ ಸುತ್ತಲೂ ಜನ ಸಮುದಾಯಗಳನ್ನು ನಿರ್ಮಿಸಲಾಯಿತು, ಅದೇ ಪರಿಪಾಠ ಈಗ ಬೆಂಗಳೂರಿನ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.


ಬೆಂಗಳೂರಿನ ಸರೋವರಗಳು, ಸಮೃದ್ಧ ವೈವಿಧ್ಯತೆ ಹೊಂದಿರುವ ಸಸ್ಯಗಳು, ಡ್ರ್ಯಾಗನ್ ಫ್ಲೈ (ಮಳೆ ಚಿಟ್ಟೆ) ಗಳಂತಹ ಕೀಟಗಳು, ಸ್ಪಾಟ್ ಬಿಲ್ಡ್ ಪೆಲಿಕಾನ್‌ಗಳು, ಯುರೇಷಿಯನ್ ಸ್ಪೂನ್‌ ಬಿಲ್‌ನಂತಹ ಪಕ್ಷಿಗಳು ಮತ್ತು ಇತರ ಹಲವು ಪ್ರಾಣಿ ಜೀವಿಗಳಿಗೆ ಪ್ರಮುಖ ಆವಾಸಸ್ಥಾನವಾಗಿದ್ದು, ಅದರ ಜೊತೆಗೆ ಅವುಗಳನ್ನು ನೀರಿನ ಮೂಲಗಳಾಗಿ ಬಳಸುವ ಇತರ ಪ್ರಾಣಿಗಳಿಗೆ ಕೂಡ ಈ ಸರೋವರಗಳು ಪ್ರಮುಖ ಸ್ಥಳಗಳಾಗಿವೆ. ತನ್ನ ಸುತ್ತಮುತ್ತಲಿನ ಸಣ್ಣ ಪ್ರದೇಶಗಳ ತಾಪಮಾನ ಮತ್ತು ಹವಾಮಾನವನ್ನು ನಿಯಂತ್ರಿಸುವಲ್ಲಿ ಕೂಡ ಅವು ಸಹಾಯ ಮಾಡುತ್ತವೆ. ಸರೋವರಗಳ ಮೇಲಿನ ಈ ಅವಲಂಬನೆಯು ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡ ಅವಶ್ಯಕತೆ ಆಗಿರದೆ, ಯುಗ ಯುಗಗಳಿಂದಲೂ ಸ್ಥಾಪಿತವಾಗಿದೆ.


ಆದರೆ, ಬೆಂಗಳೂರಿನ ಮೇಲೆ ಬೀಸಿದ ಕೈಗಾರಿಕೀಕರಣದ ಅಲೆಗಳು ನಗರವನ್ನು ಅಗಾಧವಾಗಿ ವಿಸ್ತರಿಸಿತು ಅಷ್ಟೇ ಅಲ್ಲದೇ ಅದರ ಜೊತೆಗೆ ಪೈಪ್ ನೀರಿನ ಸೌಲಭ್ಯದ ಪ್ರವೇಶದೊಂದಿಗೆ ನಗರದ ಜನರಿಗೆ ಈ ಕೆರೆಗಳ ಮೇಲಿನ ಅವಲಂಬನೆ ಕಡಿಮೆಯಾಯಿತು. ನಗರದ ವಿಸ್ತರಣೆಯು ಈ ಹಲವಾರು ಸರೋವರಗಳ ಮೇಲೆ ಮಾನವ ಅತಿಕ್ರಮಣಕ್ಕೆ ಕಾರಣವಾಯಿತು, ಜನ ವಸತಿ ಹೆಚ್ಚಾದಂತೆ ಕೆರೆಗಳನ್ನು ಬರಿದಾಗಿಸಿ ಆ ಕೆರೆಗಳ ಸಮಾಧಿಯ ಮೇಲೆ ಕಟ್ಟಡಗಳನ್ನು ಕಟ್ಟಲಾಯಿತು. 2017ರಲ್ಲಿ ಸದನ ಸಮಿತಿ ನೀಡಿದ ಕೆರೆ ಒತ್ತುವರಿ ವರದಿಯ ಪ್ರಕಾರ ಬೆಂಗಳೂರು ನಗರ ಜಿಲ್ಲೆಯ ಅಡಿಯಲ್ಲಿ ಬರುವ 837 ಕೆರೆಗಳ ಪೈಕಿ ಸುಮಾರು 88 ಕೆರೆಗಳು ಈಗಾಗಲೇ ಕಣ್ಮರೆಯಾಗಿವೆ. ಕಾರ್ಖಾನೆಗಳು, ಅಪಾರ್ಟ್‌ಮೆಂಟ್ ಸಮುಚ್ಚಯಗಳು, ಟೆಕ್ ಪಾರ್ಕ್‌ಗಳು ಮತ್ತು ಜನವಸತಿ ಪ್ರದೇಶಗಳು ಈ ಜಾಗಗಳನ್ನು ಅತಿಕ್ರಮಣ ಮಾಡಿರುವುದೇ ಈ ಎಲ್ಲಾ ಕೆರೆಗಳು ಕಣ್ಮರೆಯಾಗಲು ಪ್ರಮುಖ ಕಾರಣವಾಗಿವೆ.


ಹಲವಾರು ಸರೋವರಗಳು ಬೆಂಗಳೂರು ನಗರದಲ್ಲಿ ಈಗ ಪ್ರಸಿದ್ಧ ಕಟ್ಟಡಗಳ ರೂಪ ತಾಳಿ ತಲೆ ಎತ್ತಿ ನಿಂತಿವೆ. ಪ್ರಖ್ಯಾತವಾದ ಜನನಿಬಿಡ ಜಾಗವಾದ ಮೆಜೆಸ್ಟಿಕ್ ಬಸ್ ನಿಲ್ದಾಣವು ಮೂಲತಃ ಧರ್ಮಾಂಬುಧಿ ಕೆರೆ ಇದ್ದ ಪ್ರದೇಶವಾಗಿತ್ತು. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನಿ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕಿ, ಹರಿಣಿ ನಾಗೇಂದ್ರ ಅವರು ತಮ್ಮ "ನೇಚರ್ ಇನ್ ದಿ ಸಿಟಿ: ಬೆಂಗಳೂರು ಇನ್ ದಿ ಪಾಸ್ಟ್, ಪ್ರೆಸೆಂಟ್ ಅಂಡ್ ಫ್ಯೂಚರ್" ಪುಸ್ತಕದಲ್ಲಿ, "ಧರ್ಮಾಂಬುಧಿ" ಸರೋವರ ಸೇರಿದಂತೆ ಹಲವಾರು ಕೆರೆಗಳನ್ನು ಮಲೇರಿಯಾ ನಿರ್ಮೂಲನೆಗೆ ಇದೊಂದೇ ಪರಿಹಾರ ಎಂದು ಜನರ ದಾರಿ ತಪ್ಪಿಸಿ ಕೆರೆಗಳಲ್ಲಿನ ನೀರನ್ನು ಬತ್ತಿಸಿ ಬರಿದಾಗಿಸಲಾಗಿದೆ.” ಎಂಬ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಶೂಲೆ ಕೆರೆಯಂತಹ ಸರೋವರಗಳನ್ನು ದೊಡ್ಡ ದೊಡ್ಡ ಕ್ರೀಡಾಂಗಣಗಳಾಗಿ ಪರಿವರ್ತಿಸಲಾಗಿದೆ, ಅದರ ಜೊತೆಯಲ್ಲಿ ಕೋರಮಂಗಲದ ದೊಡ್ಡ ಟ್ಯಾಂಕ್ ಅನ್ನು ವಸತಿ ಉದ್ಯಮವಾದ ನ್ಯಾಷನಲ್ ಗೇಮ್ಸ್ ವಿಲೇಜ್ ಸ್ವಾಧೀನಪಡಿಸಿಕೊಂಡಿದೆ.


ಕೇವಲ ಅತಿಕ್ರಮಣಗಳಷ್ಟೇ ಅಲ್ಲ, ಈ ಎಲ್ಲಾ ಕೆರೆಗಳನ್ನು ಸಂಸ್ಕರಿಸದೇ ಹಾಗೆ ಬಿಟ್ಟ ಕೈಗಾರಿಕಾ ತ್ಯಾಜ್ಯ ಮತ್ತು ಮನೆಯ ತ್ಯಾಜ್ಯಗಳಿಂದ ತುಂಬಿಸಿ ಕೆರೆಗಳ ಉಸಿರಾಟವನ್ನೇ ನಿಲ್ಲಿಸಲಾಗುತ್ತಿದೆ. ಬೆಳ್ಳಂದೂರು ಮತ್ತು ವರ್ತೂರಿನಂತಹ ಸರೋವರಗಳ ಮೇಲ್ಮೈಯಲ್ಲಿ ಕೊಳಚೆ ಮತ್ತು ಕೈಗಾರಿಕಾ ತ್ಯಾಜ್ಯಗಳಿಂದ ಉತ್ಪನ್ನವಾಗುವ ರಾಸಾಯನಿಕ ಮತ್ತು ಜೈವಿಕ ಸರ್ಫ್ಯಾಕ್ಟಂಟ್‌ಗಳ ಪರಿಣಾಮವಾಗಿ ಹಾನಿಕಾರಕವಾದ ನೊರೆಯು ರೂಪುಗೊಳ್ಳುತ್ತಿದೆ. ಪೀಣ್ಯ ಕೈಗಾರಿಕಾ ವಲಯದ ಕೆರೆಗಳು ಭಾರೀ ಲೋಹದ ವಿಷಮಯ ತ್ಯಾಜ್ಯಗಳಿಂದ ಕೂಡಿದೆ, ಇದೇ ತ್ಯಾಜ್ಯಮಯ ನೀರು ಜಾನುವಾರುಗಳಿಗೆ ಮತ್ತು ಕೆರೆಗಳನ್ನು ನೀರಿನ ಮೂಲವಾಗಿ ಬಳಸಿಕೊಂಡು ಕೃಷಿ ಭೂಮಿಯಲ್ಲಿ ಬೆಳೆಯುತ್ತಿರುವ ಕೃಷಿಕರ ಬೆಳೆಗಳಿಗೆ ಹರಿಯುತ್ತದೆ, ಇದು ನಂತರದಲ್ಲಿ ಅಲ್ಲಿಯ ಜನರಿಗೇ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಒಂದು ಕಾಲದಲ್ಲಿ ತನ್ನಲ್ಲಿನ ಸುಂದರವಾದ ಸರೋವರಗಳಿಗೆ ಹೆಸರುವಾಸಿಯಾದ ನಗರವು ಈಗ ತನ್ನ ಹಲವಾರು ಸರೋವರಗಳು ಬೆಂಕಿಯಲ್ಲಿ ಹೊತ್ತಿ ಉರಿದ ಕಾರಣದಿಂದ ಬಂದಿರುವ ಅಪಖ್ಯಾತಿಯನ್ನು ತನ್ನ ತಲೆಯ ಮೇಲೆ ಹಾಕಿಕೊಂಡ ದುರದೃಷ್ಟಕರ ಕ್ಷಣಗಳೂ ಕೂಡ ಇವೆ. ಸರೋವರಗಳಲ್ಲಿ ಸಾವಯವ ತ್ಯಾಜ್ಯವನ್ನು ಸಂಸ್ಕರಿಸದೆ ಸುರಿಯುವುದೇ ಈ ಅನಿರೀಕ್ಷಿತ ಬೆಂಕಿಗೆ ಕಾರಣ ಆಗಿರಬಹುದು ಎಂದು ಸಿದ್ಧಾಂತಿಸಲಾಗಿದೆ, ಏಕೆಂದರೆ ಈ ಮಲಿನ ತ್ಯಾಜ್ಯಗಳು ಸುತ್ತಲಿನ ಪರಿಸರವನ್ನು ಮೀಥೇನ್‌ನಂತಹ ಬಹು ಬೇಗನೆ ದಹಿಸುವ ಅನಿಲಗಳ ಸಂಗ್ರಹಕ್ಕೆ ಸೂಕ್ತವಾಗಿಸುತ್ತದೆ. ಬೆಳ್ಳಂದೂರು ಸರೋವರವು ಈಗಾಗಲೇ ಹಲವು ಬಾರಿ ಬೆಂಕಿಗೆ ಆಹುತಿ ಆಗಿದೆ, ಅದರಲ್ಲಿ 2018 ರಲ್ಲಿ ಭಯಾನಕ 30 ಗಂಟೆಗಳ ಕಾಲ ಹೊತ್ತಿ ಉರಿದ ಬೆಂಕಿಯು ನರಕದ ಚಿತ್ರಣವನ್ನು ತೋರಿಸಿದ್ದು ಸುಳ್ಳಲ್ಲ.


ಒಂದಾನೊಂದು ಸಮಯದಲ್ಲಿ ಈ ನಗರದ ಜೀವನಾಡಿಯಾಗಿದ್ದ ಈ ಕೆರೆಗಳು ಈಗ ಮಾಲಿನ್ಯದಿಂದ ತುಂಬಿ ತುಳುಕುತ್ತಾ ಇವೆ. ಅದರ ಜೊತೆಗೆ, ಕೆರೆಗಳನ್ನೆ ವಾಸ್ತವ್ಯ ಮಾಡಿಕೊಂಡಿದ್ದ ಪ್ರಾಣಿ ಹಾಗೂ ಸಸ್ಯಪ್ರಭೇದಗಳನ್ನು ಅತಿಕ್ರಮಣಕಾರರು ನಾಶ ಪಡಿಸಿದ್ದಾರೆ. ಬೆಳ್ಳಂದೂರು ಸರೋವರದಂತಹ ಸರೋವರಗಳು ಮಿಂಚುಳ್ಳಿಗಳು ಮತ್ತು ಗಿಳಿಗಳಂತಹ ಹಲವಾರು ಪಕ್ಷಿ ಪ್ರಭೇದಗಳನ್ನು ಮತ್ತು ಮಾನಿಟರ್ ಹಲ್ಲಿಗಳಂತಹ ಸರೀಸೃಪಗಳನ್ನು ತಮ್ಮ ಒಡಲಲ್ಲಿ ಔದಾರ್ಯತೆ ತೋರಿ ಸಾಕುತ್ತಿದ್ದವು, ಆದರೆ ಈಗ ಆ ಜೀವಗಳೆಲ್ಲ ಜಾಗ ಬಿಟ್ಟಿವೆ.ಹಸಿರಿನ ಬಿಕ್ಕಟ್ಟು

ನಗರದ ಅತ್ಯಮೂಲ್ಯ ಸರೋವರಗಳನ್ನು ಕಳೆದುಕೊಂಡ ನೋವು ಆಳವಾದ ಗಾಯಗಳನ್ನು ಈಗಾಗಲೇ ಮಾಡಿದರೆ, ಇನ್ನೂ ಮಾಸದ ಈ ಗಾಯಗಳ ಮೇಲೆ ಉಪ್ಪು ಚೆಲ್ಲಿದಂತೆ ನಗರದ ಬೂದು ಬಣ್ಣದ ಕಾಂಕ್ರೀಟ್ ಕಾಡು ಮೊದಲಿದ್ದ ಹಸಿರಿನ ಹೊದಿಕೆಯನ್ನು ನಿಧಾನವಾಗಿ ದೂರ ಮಾಡುತ್ತಿದೆ. 20 ನೇ ಶತಮಾನದ ನಂತರದ ಭಾಗವು ಬೆಂಗಳೂರಿನ ನಗರ ಭಾಗದ ವಿಸ್ತರಣೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಿತು. ಬೆಂಗಳೂರು ನಗರ ಭಾರತ ದೇಶದ ಐಟಿ ಉದ್ಯಮದ ಬೆಳವಣಿಗೆಯ ಕೇಂದ್ರ ಬಿಂದುವಾಯಿತು. ಹಿಂದೆ ಗ್ರಾಮೀಣ ಭಾಗದಂತೆ ಹಾಗೂ ಪುಟ್ಟ ಪಟ್ಟಣದಂತೆ ಇದ್ದ ವೈಟ್‌ಫೀಲ್ಡ್‌ನಂತಹ ಸ್ಥಳಗಳನ್ನು ನಗರೀಕರಣದ ಜಾಲದಲ್ಲಿ ಬಂಧಿಸಲಾಯಿತು. ಇದರ ಪರಿಣಾಮವಾಗಿ, ಈ ಬೆಳವಣಿಗೆಯು ಅಲ್ಲಿನ ನೈಸರ್ಗಿಕ ಪ್ರದೇಶಗಳಿಗೆ ಹಲವಾರು ಕಷ್ಟಗಳನ್ನು ತನ್ನೊಂದಿಗೆ ಕರೆ ತಂದಿತ್ತು, ಈ ಎಲ್ಲಾ ಪ್ರದೇಶಗಳನ್ನು ವಸತಿ ಮತ್ತು ಕೈಗಾರಿಕಾ ಪ್ರದೇಶಗಳಾಗಿ ಸಂಪೂರ್ಣವಾಗಿ ಪರಿವರ್ತಿಸಲಾಯಿತು.ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ದೊಡ್ಡ ಯೋಜನೆಗಳು ನಗರಕ್ಕೆ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಎಂದು ದಾಪುಗಾಲಿಟ್ಟು ಬಂದಾಗ ಸ್ಥಳೀಯ ವನ್ಯಜೀವಿಗಳನ್ನು ತನ್ನ ಬೃಹದಾದ ಹೆಜ್ಜೆಯ ಅಡಿಯಲ್ಲಿ ಹೊಸಕಿಯೇ ನಂತರದಲ್ಲಿ ಮುಂದೆ ಸಾಗಿದ್ದು. ಕೈಗಾರಿಕೀಕರಣ ಪರಿಸರದ ಮೇಲೆ ಅಂದಿನಿಂದ ಇಂದಿಗೂ ವಿರುದ್ಧವಾಗಿಯೇ ಪರಿಣಾಮ ಬೀರಿದೆ. ಬೆಂಗಳೂರಿನ ಜಿಕೆವಿಕೆಯ ಸಂಶೋಧಕರು 2010 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ವಿಮಾನ ನಿಲ್ದಾಣದ ಸ್ಥಾಪನೆಯು, ಅಲ್ಲಿನ ಪ್ರದೇಶದ ಭೂಮಿಯ ನಕ್ಷೆ, ಹಸಿರು ಹೊದಿಕೆ, ಹವಾಮಾನ, ತರುವಾಯ, ಅಲ್ಲಿನ ಪಕ್ಷಿಗಳು ಮತ್ತು ಚಿಟ್ಟೆಗಳ ವೈವಿಧ್ಯಮಯ ಸಂಖ್ಯೆಯಲ್ಲಿ ಉಂಟಾದ ದೊಡ್ಡ ಪ್ರಮಾಣದ ಬದಲಾವಣೆಗಳಿಗೆ ಕಾರಣವಾಯಿತು ಎಂದು ತೋರಿಸಿದೆ. ಅದರಲ್ಲಿ ಬೆಟ್ಟಕೋಟೆ ರಾಜ್ಯ ಅರಣ್ಯ ಮತ್ತು ರಾಮನಹಳ್ಳಿ ಪ್ರದೇಶಗಳಲ್ಲಿ, ಪಕ್ಷಿ ಸಂಕುಲದ ಮೇಲೆ ವಿಮಾನ ನಿಲ್ದಾಣ ನಿರ್ಮಾಣದಿಂದ ಹೆಚ್ಚು ಪರಿಣಾಮ ಬೀರಿದೆ ಎಂದು, ಪಕ್ಷಿಗಳ ಸಂಖ್ಯೆಯಲ್ಲಿ 50% ಕಡಿಮೆ ಆಗಿದ್ದು ಕಂಡುಬಂದಿದೆ. ಜೊತೆಗೆ ಪಕ್ಷಿಗಳ ಪ್ರಭೇಧಗಳ ಸಂಖ್ಯೆಯಲ್ಲಿನ ಕಡಿತವು 50% ಕ್ಕಿಂತ ಹೆಚ್ಚಿದೆ ಎಂಬ ಮಾಹಿತಿಯನ್ನು ಈ ಸಂಶೋಧನೆಯ ಮೂಲಕ ನಾವು ಧೃಡಿಪಡಿಸಿಕೊಳ್ಳಬಹುದು.


ಹಲವಾರು ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಹುಟ್ಟಿಸಬೇಕೆಂದು ಪ್ರಸ್ತಾಪಿಸಲಾಗಿದೆ, ಇದಕ್ಕಾಗಿ ಅತೀ ಹೆಚ್ಚಿನ ಜಾಗದ ಅರಣ್ಯನಾಶದ ಅಗತ್ಯವಿದೆ. ನಗರದ ಮಧ್ಯ ಭಾಗದಲ್ಲಿರುವ ಚಾಲುಕ್ಯ ಸರ್ಕಲ್‌ನಿಂದ ಉತ್ತರದ ಹೆಬ್ಬಾಳ ಜಂಕ್ಷನ್‌ವರೆಗೆ ಭರ್ಜರಿ 1,700 ಕೋಟಿ ರೂ.ಗಳ ಮೊತ್ತದಲ್ಲಿ ನಿರ್ಮಾಣ ಆಗಬೇಕಿದ್ದ ಉಕ್ಕಿನ ಮೇಲ್ಸೇತುವೆ ಯೋಜನೆಯಂತಹ ಕೆಲವು ಯೋಜನೆಗಳನ್ನು ಸುಮಾರು 800 ಮರಗಳನ್ನು ತೆರವುಗೊಳಿಸಬೇಕಾಗಿ ಬಂದುದರಿಂದ, ನಾಗರಿಕರ ಮತ್ತು ಕಾರ್ಯಕರ್ತರಿಂದ ಉಂಟಾದ ಭಾರಿ ಪ್ರತಿರೋಧದ ಕಾರಣಗಳಿಂದ ಕೈಬಿಡಲಾಯಿತು.


ಹಾಗಿದ್ದಲ್ಲಿ ಕೂಡ, ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುವ ಅಷ್ಠ ಪಥಗಳ ಪರ್ಯಾಯ ರಸ್ತೆಗೆ ಸಂಪರ್ಕ ಕೊಡುವಂತೆ ಬಾಹ್ಯ ವರ್ತುಲ ರಸ್ತೆ ಯೋಜನೆಯಂತಹ ಇತರ ಹಲವಾರು ಯೋಜನೆಗಳಿಗೆ ಆಗಲೇ ಚಾಲನೆ ನೀಡಲಾಗಿದೆ. ಇದಕ್ಕೆ ಸರಿಸುಮಾರು 38,000 ಮರಗಳ ಹಾಗೂ ಅರಣ್ಯನಾಶದ ಅಗತ್ಯವಿದೆ. ಈ ಮಟ್ಟದ ಅರಣ್ಯನಾಶದಿಂದ ಪರಿಸರದ ಮೇಲೆ ಆತಂಕಕಾರಿ ಪರಿಣಾಮ ಬೀರುವುದಂತೂ ಖಚಿತ. ಅದಿಷ್ಟೇ ಅಲ್ಲ ವಾಸ್ತವದಲ್ಲಿ ಮೆಟ್ರೋ ನಿರ್ಮಾಣದ ಎರಡನೇ ಹಂತ ಹಾಗೂ ಜಯಮಹಲ್ ರಸ್ತೆ ಮತ್ತು ಸ್ಯಾಂಕಿ ರಸ್ತೆಯಂತಹ ರಸ್ತೆಗಳನ್ನು ಅಗಲಗೊಳಿಸುವ ಇನ್ನೂ ಹತ್ತು ಹಲವಾರು ಪ್ರಸ್ತಾವಿತ ಅಭಿವೃದ್ಧಿ ಯೋಜನೆಗಳಿವೆ. ಈ ಯೋಜನೆಗಳಿಗೆ ಅಂದಾಜು 60,200 ಮರಗಳನ್ನು ತಿಂದು ತೇಗಿ, ವಿಶಾಲವಾದ ಹಸಿರು ಪ್ರದೇಶಗಳನ್ನು ತೆರವುಗೊಳಿಸುವ ಅಗತ್ಯವಿದೆ. ವಿಪರ್ಯಾಸವೆಂದರೆ, ಕರ್ನಾಟಕ ಅರಣ್ಯ ಇಲಾಖೆಯು ಒಂದು ಸರೋವರವನ್ನು ನಿರ್ಮಿಸಲು 6000 ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಮುಂದಾಗಿದೆ, ಇದನ್ನು ಹಾಗೆ ನೋಡಿದಲ್ಲಿ ಸಾಮಾನ್ಯವಾಗಿ ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುವ ದೃಷ್ಟಿ ಕೋನವೇ ಆಗಿದ್ದರೂ ಕೂಡ, ಇದರಿಂದ ನಂತರದಲ್ಲಿ ತೆರಬೇಕಾಗಿ ಬರುವ ವೆಚ್ಚ ಅಷ್ಟಿಷ್ಟಲ್ಲ. ನಗರವು ಪ್ರವರ್ಧಮಾನಕ್ಕೆ ಬರಲು ಮತ್ತು ಅಭಿವೃದ್ಧಿ ಹೊಂದಲು ಅರಣ್ಯಗಳು ತಮ್ಮ ಪರೋಪಕಾರಿ ಹೊದಿಕೆಯನ್ನು ವಿಸ್ತರಿಸಿರುವ ಈ ನಗರದಲ್ಲಿ, ಬೃಹತ್ ಪ್ರಮಾಣದಲ್ಲಿ ಉಂಟಾಗುವ ಅರಣ್ಯನಾಶಗಳು ಮಾನವ ಮತ್ತು ಪ್ರಾಣಿ ಸಂಕುಲ ಎರಡಕ್ಕೂ ಸಮಾನವಾಗಿ ಪರಿಣಾಮ ಉಂಟುಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ .ವನ್ಯಜೀವಿಗಳಿಗೆ ಕೂಡ ನಗರದಲ್ಲಿ ಅವರದೇ ವಿಳಾಸವಿದೆ

ಬೆಂಗಳೂರು ನಗರವು ವಿವಿಧ ಪ್ರಭೇಧಗಳ ವನ್ಯಜೀವಿಗಳು ಮತ್ತು ಸಸ್ಯವರ್ಗಗಳಿಗೆ ಶ್ರೀಮಂತ ನೆಲೆಯಾಗಿದೆ. ಖ್ಯಾತ ಪರಿಸರವಾದಿ ಎ ಎನ್ ಯಲ್ಲಪ್ಪ ರೆಡ್ಡಿ ಅವರು ದಿ ನ್ಯೂಸ್ ಮಿನಿಟ್‌ಗೆ ಹೇಳಿದಂತೆ ಕಳೆದ ಕೆಲವು ದಶಕಗಳಿಂದ ಬೆಂಗಳೂರು ನಗರದಲ್ಲಿ ವನ್ಯಜೀವಿಗಳು ಕಡಿಮೆಯಾಗಿದ್ದರೂ ಕೂಡ, ಹಲವಾರು ಜೀವಿ ಪ್ರಭೇದಗಳು ನಗರ ಪ್ರದೇಶಗಳಿಗೆ ಒಗ್ಗಿಕೊಂಡಿವೆ ಜೊತೆಗೆ ಅದನ್ನೇ ತಮ್ಮ ಮನೆಯಾಗಿ ಸ್ವೀಕಾರ ಮಾಡಿಕೊಂಡಿವೆ. ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿ ಸಂಸ್ಥೆಗಳಾದ "ಏವಿಯನ್ ಎಂಡ್ ರೆಪ್ಟಯ್ಲ್ ರಿಹ್ಯಾಬಿಲಿಟೇಷನ್ ಸೆಂಟರ್" ಮತ್ತು "ಪೀಪಲ್ ಫಾರ್ ಅನಿಮಲ್ಸ್" ಅವರನ್ನು ಸಾಮಾನ್ಯವಾಗಿ ಬ್ಲ್ಯಾಕ್ ಕೈಟ್ ಅಂತಹ ಗಿಡುಗ ಪಕ್ಷಿಗಳಿಂದ ಹಿಡಿದು ರಸ್ಸೆಲ್ ವೈಪರ್‌ನಂತಹ ಹಾವುಗಳವರೆಗೆ ವಿವಿಧ ವನ್ಯ ಜೀವಿಗಳನ್ನು ರಕ್ಷಿಸಲು ಕರೆಯಲಾಗುತ್ತದೆ. ಬೆಂಗಳೂರಿನ ನಗರ ಜೀವನದಿಂದ ತಪ್ಪಿಸಿಕೊಳ್ಳಲಾಗದ ವನ್ಯಜೀವಿಗಳು, ನಗರದ ವನ್ಯಜೀವಿ ಉತ್ಸಾಹಿಗಳಿಗೆ ನಿಜವಾಗಿಯೂ ಅದ್ಬುತ ಆಕರ್ಷಕವಾಗಿದೆ. ಅಂತಹ ಒಂದು ಉದಾಹರಣೆಯೆಂದರೆ ಮರದ ಮೇಲೆ ವಾಸಿಸುವ ಸ್ಲೆಂಡರ್ ಲೋರಿಸ್. ಕೈಗಾರಿಕೀಕರಣ ಮತ್ತು ಹಸಿರು ಆವರಣದ ನಷ್ಟವು ಅವುಗಳ ಆವಾಸಸ್ಥಾನವನ್ನು ತುಂಡು ತುಂಡುಗಳಾಗಿ ಕತ್ತರಿಸಿದ್ದಾಗ್ಯು, ಅವು ಈಗ ಹೆಣ್ಣೂರು ಕೆರೆಯ ಜೀವವೈವಿಧ್ಯ ಉದ್ಯಾನವನದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅರ್ಬನ್ ಸ್ಲೆಂಡರ್ ಲೋರಿಸ್ ಪ್ರಾಜೆಕ್ಟ್ 2016 ರಲ್ಲಿ ನಡೆಸಿದ ಸಮೀಕ್ಷೆಗಳು ಮರಗಳ ಮೇಲ್ಚಾವಣಿಗಳ ನಡುವೆ ಒಂದಕ್ಕೊಂದು ಸಂಪರ್ಕ ಇರುವುದು ಅವುಗಳ ಉಳಿವಿಗೆ ಅತ್ಯಗತ್ಯ ಎಂದು ತೋರಿಸುತ್ತವೆ.


ಗಾರ್ಗೇನಿ ಬಾತುಕೋಳಿ ಹಾಗೂ ಪಿನ್‌ಟೇಲ್ ಬಾತುಕೋಳಿ ಮತ್ತು ಕೆಲವು ಸ್ಯಾಂಡ್‌ಪೈಪರ್‌ಗಳಂತಹ (ಆದರೆ ಇಷ್ಟಕ್ಕೆ ಸೀಮಿತವಾಗಿಲ್ಲ) ಇತರೆ ಹಲವಾರು ವಲಸೆ ಹಕ್ಕಿಗಳಿಗೆ ಬೆಂಗಳೂರು ಒಂದು ಆಶ್ರಯ ತಾಣವಾಗಿದೆ. ಬೆಂಗಳೂರಿನ ಮೂಲಕ ಭಾರತದ ಮತ್ತಷ್ಟು ದಕ್ಷಿಣ ಭಾಗಕ್ಕೆ ವಲಸೆ ಹೋಗುವ ಹಲವು ಪಕ್ಷಿ ಪ್ರಭೇಧಗಳಿಗೆ ಈ ನಗರ ಆತಿಥ್ಯ ಒದಗಿಸುವ ತಾಣವಾಗಿದೆ. ಆಸಕ್ತಿಯುಳ್ಳ ಪಕ್ಷಿಪ್ರೇಮಿಗಳು ಹೇಸರಘಟ್ಟ ಕೆರೆ ಮತ್ತು ವ್ಯಾಲಿ ಸ್ಕೂಲ್‌ನಂತಹ ಪಕ್ಷಿಗಳ ವೀಕ್ಷಣೆಗೆ ಶ್ರೀಮಂತವಾಗಿರುವ ತಾಣಗಳಿಗೆ ಭೇಟಿ ನೀಡಿ ನಗರದಲ್ಲಿನ ಪಕ್ಷಿಗಳ ಜೀವವೈವಿಧ್ಯವನ್ನು ನೋಡಿ ಆನಂದಿಸುತ್ತಾರೆ. eBird ನಂತಹ ಆನ್‌ಲೈನ್ ಡೇಟಾಬೇಸ್‌ಗಳು ಪಕ್ಷಿಪ್ರೇಮಿಗಳಿಗೆ ಸ್ಥಳೀಯ ಮತ್ತು ವಲಸೆ ಹಕ್ಕಿಗಳನ್ನು ಟ್ರ್ಯಾಕ್ ಮಾಡಲು ಉಪಯುಕ್ತ ಸಂಪನ್ಮೂಲಗಳಾಗಿವೆ. ಆದರೆ, ಈಗೀಗ ಬೆಂಗಳೂರಿಗೆ ವಲಸೆ ಬರುವ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆ. ಇತ್ತೀಚಿನ ಅಧ್ಯಯನವು ವಲಸೆ ಹಕ್ಕಿಗಳ ಸಂಖ್ಯೆಯಲ್ಲಿ ಆಗಿರುವ ಕಡಿತವನ್ನು ಎತ್ತಿ ತೋರಿಸಿದೆ, ಇದು ವಲಸೆಯ ವಿಶ್ರಾಂತಿ ತಾಣಗಳಿಗಿಂತ ಹೆಚ್ಚಾಗಿ ಅವುಗಳ ಸಂತಾನೋತ್ಪತ್ತಿಯ ಸ್ಥಳಗಳಲ್ಲಿ ಆದ ಕೆಲವು ಬದಲಾವಣೆಗಳಿಂದ ಆಗಿರಬಹುದೆಂದು ವಿಜ್ಞಾನಿಗಳು ಊಹಿಸುತ್ತಾರೆ. ಆದರೆ ಇದರಿಂದ ಸ್ಥಳೀಯ ಪಕ್ಷಿಗಳ ಸಂಖ್ಯೆಯಲ್ಲಿ ಆದಂತಹ ಹೆಚ್ಚಳವನ್ನು ಅವರು ಗಮನಿಸಿದ್ದಾರೆ. "ರವಿ ಜಂಭೇಕರ್" ಅವರು "ದಿ ಇಂಡಿಯನ್ ಎಕ್ಸ್‌ಪ್ರೆಸ್‌" ನಲ್ಲಿ ಹೇಳಿದಂತೆ, ಇದಕ್ಕೆ ಕಾರಣ ಸ್ಥಳೀಯ ಪಕ್ಷಿಗಳು ಅಭಿವೃದ್ಧಿ ಹೊಂದಲು ಸರೋವರಗಳ ಪುನಃಸ್ಥಾಪನೆ ಮತ್ತು ಸರೋವರಗಳಲ್ಲಿ ದ್ವೀಪಗಳ ರಚನೆ ಮಾಡಿರುವ ಅಂಶಗಳಿಂದ ಆಗಿರಬಹುದು ಎಂದು.


Photographer: Anoushka Dasgupta


ನಗರದ ರಕ್ಷಾಕವಚ- ಒಂದು ಸರೋವರ ಮತ್ತು ಒಂದು ಮರ

ನಗರದ ಪರಿಸರವಾದಿಗಳು, ಆತ್ಮಸಾಕ್ಷಿ ಉಳ್ಳಂತಹ ನಾಗರಿಕರು ಮತ್ತು ಆಡಳಿತ ಮಂಡಳಿಗಳು ಅಭಿವೃದ್ಧಿಯ ಹೆಸರಿನಲ್ಲಿ ಓಡುತ್ತಿರುವ ಓಟದಲ್ಲಿ ಎದ್ದ ಧೂಳಿನಿಂದ ಬೆಂಗಳೂರು ಉಸಿರುಗಟ್ಟಿ ಸಾಯುವ ಮೊದಲು ನೈಸರ್ಗಿಕ ಪ್ರದೇಶಗಳ ಭಾಗಗಳನ್ನು ಪುನರ್ಸ್ಥಾಪಿಸಲೇ ಬೇಕಾದ ತುರ್ತು ಅಗತ್ಯವನ್ನು ಅರಿತುಕೊಂಡಿದ್ದಾರೆ. 2019 ರಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನ ಯೋಜನೆಗಳನ್ನು ವಿವರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ 'ಟರ್ಮಿನಲ್ ಇನ್ ಎ ಗಾರ್ಡನ್' ಎಂಬ ಶೀರ್ಷಿಕೆಯ ಅಡಿಯಲ್ಲಿ ವರ್ಣಿಸಲಾಗಿತ್ತು ಹಾಗೂ ಈ ವಿಡಿಯೋ ವೈರಲ್ ಕೂಡ ಆಗಿತ್ತು. ಈ ಟರ್ಮಿನಲ್ ಬೆಂಗಳೂರಿನ 'ಗಾರ್ಡನ್ ಸಿಟಿ' ಎಂಬ ಖ್ಯಾತಿಯನ್ನು ಪ್ರತಿಬಿಂಬಿಸುತ್ತದೆ ಎನ್ನುವುದು ಸಂಬಂಧ ಪಟ್ಟವರ ಹೇಳಿಕೆ, ಏಕೆಂದರೆ ಈ ಟರ್ಮಿನಲ್‌ನೊಳಗೆ ನಿಜವಾದ ಕಾಡಿನಂತೆ ಹಚ್ಚ ಹಸಿರಿನಿಂದ ಮತ್ತು ಜಲಮೂಲಗಳನ್ನು ನಿರ್ಮಿಸಿ ಜೀವ ವೈವಿಧ್ಯತೆ ಹೊಂದುವ ಗುರಿಯನ್ನು ಹೊಂದಿದೆ. ಅವರು ಇಂಧನ ಉಳಿತಾಯ ಹಾಗೂ ತ್ಯಾಜ್ಯ ಮತ್ತು ಮಾಲಿನ್ಯದ ನಿಯಮಿತ ನಿಯಂತ್ರಣವನ್ನು ಈ ಟರ್ಮಿನಲ್ ನಿರ್ಮಾಣದಿಂದ ಸಾಧಿಸುತ್ತೇವೆ ಎಂದು

ಸಮರ್ಥನೆ ಮಾಡಿಕೊಂಡಿದ್ದಾರೆ.


ಸ್ಥಳೀಯ ಆಡಳಿತ ಮಂಡಳಿಗಳು ಮತ್ತು ನಗರದ ನಾಗರಿಕರು ಸಹ ಅತಿಕ್ರಮಣಗೊಂಡ ಮತ್ತು ಕಲುಷಿತಗೊಂಡ ಕೆರೆಗಳನ್ನು ಪುನರ್ಸ್ಥಾಪಿಸಲು ಈಗ ಪ್ರಾರಂಭಿಸಿದ್ದಾರೆ. ಕರ್ನಾಟಕ ಸರ್ಕಾರವು ಯಲಹಂಕ ಹೋಬಳಿಯ ಗಂಟಿಗಾನಹಳ್ಳಿ ಕೆರೆ ಮತ್ತು ಆನೇಕಲ್‌ನ ಹೂವಿನಕೆರೆ, ಹಾಗೂ ಇತರೆ ಕೆರೆಗಳು ಸೇರಿದಂತೆ ಸರಿಸುಮಾರು 250 ಎಕರೆಗೂ ಹೆಚ್ಚು ಅತಿಕ್ರಮಣವಾಗಿದ್ದ ಕೆರೆಗಳನ್ನು ಅಕ್ರಮ ಒತ್ತುವರಿಗಳನ್ನು ತೆಗೆದುಹಾಕಿ, ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡು, ಯಾವುದೇ ಅಡೆತಡೆಗಳಿಲ್ಲದೆ ಪುನಃ ಕೆರೆಗೆ ಸಿಹಿನೀರು ಪೂರೈಕೆ ಆಗುವಂತೆ ಅನುವು ಮಾಡಿಕೊಟ್ಟಿದೆ.


ಈ ಕಾರ್ಯದಲ್ಲಿ ಅಪಾರವಾಗಿ ಸಹಾಯ ಮಾಡುತ್ತಿರುವ ಕಾರ್ಯಕರ್ತರಲ್ಲಿ ಒಬ್ಬರು ಎಂದರೆ ಆನಂದ್ ಮಲ್ಲಿಗವಾಡ. ತರಬೇತಿಯಿಂದ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಇವರು ಸಂಸೇರಾ ಇಂಜಿನಿಯರಿಂಗ್ ನ ಸಿಎಸ್ಆರ್ ನಿಧಿಯಿಂದ ಭರ್ಜರಿ 1 ಕೋಟಿ ರೂ.ಗಳ ಬಜೆಟ್ ಅನ್ನು ಬಳಸಿ ಆನೇಕಲ್ ಬಳಿಯ ಸುಮಾರು 36 ಎಕರೆ ವಿಶಾಲವಾದ ಕ್ಯಾಲಸನಹಳ್ಳಿ ಕೆರೆಯನ್ನು ಕೇವಲ 45 ದಿನಗಳಲ್ಲಿ ಪುನರುಜ್ಜೀವನಗೊಳಿಸಿದ್ದಾರೆ. ಅವರು ಕೆರೆಯಲ್ಲಿ ಕಟ್ಟೆ, ಒಡ್ಡುಗಳು ಮತ್ತು ಬೇರ್ಪಡಿಕೆಗಳನ್ನು ರಚಿಸಲು ನೈಸರ್ಗಿಕ ವಸ್ತುಗಳನ್ನೇ ಬಳಸಿದರು. ಸರೋವರದ ಸುತ್ತಲಿನ ಭೂಮಿಯಲ್ಲಿ ವಾಸಿಸುವ ಸ್ಥಳೀಯ ಗ್ರಾಮಸ್ಥರು ಪುನರುಜ್ಜೀವನಗೊಂಡ ಕೆರೆಯನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ ಎಂದು ಅವರು ಮೊದಲು ಖಚಿತಪಡಿಸಿಕೊಂಡರು, ಹೀಗಾಗಿ ಸರೋವರದ ನೇರ ಫಲಾನುಭವಿಗಳನ್ನು ಕೆರೆಯ ಹಾಗೂ ಅದರ ಸುತ್ತಲಿನ ಪರಿಸರದ ಸುಸ್ಥಿರ ಸಂರಕ್ಷಣೆಯ ಪ್ರಮುಖ ಭಾಗವಾಗಿ ಗಣನೆಗೆ ತೆಗೆದುಕೊಳ್ಳುವುದು ಯಾವಾಗಲೂ ಅತ್ಯುತ್ತಮ ವಿಧಾನ.


ಹಸಿರು ಉಳಿದಿರುವ ಸ್ಥಳಗಳ ಸಂರಕ್ಷಣೆಯು ನಗರದ ಅಸ್ತಿತ್ವವನ್ನು ಸಂರಕ್ಷಿಸುವುದರ ಅವಿಭಾಜ್ಯ ಅಂಗವಾಗಿದೆ. ಕಬ್ಬನ್ ಪಾರ್ಕ್‌ನಲ್ಲಿ 40 ವರ್ಷಗಳಷ್ಟು ಹಳೆಯದಾದ ಬಿದಿರಿನ ತೋಪುಗಳನ್ನು ತೆರವು ಮಾಡಬೇಕಾಗಿ ಬರಬಹುದು, ಇದು ವಿವಾದತ್ಮಕವಾಗಿ ಕಂಡರೂ ಕೂಡ ಸಾಂದರ್ಭಿಕವಾಗಿ, ಹೊಸ ಪೀಳಿಗೆಗೆ ದಾರಿ ಮಾಡಿಕೊಡಲು ಹಸಿರು ಹೊದಿಕೆಯ ಭಾಗಗಳನ್ನು ಆಗಾಗ ತೆರವುಗೊಳಿಸಬೇಕಾಗಬಹುದು. ಇಲ್ಲಿನ 200 ಬಿದಿರಿನ ಮರಗಳು, ತಮ್ಮ ಜೀವಿತಾವಧಿಯ ಅಂತ್ಯವನ್ನು ತಲುಪಿದ್ದ ಕಾರಣದಿಂದ, 2018 ರಲ್ಲಿ ಅವುಗಳನ್ನು ತೆರವುಗೊಳಿಸಲಾಯಿತು ಮತ್ತು ಹನ್ನೆರಡು ಪ್ರಭೇದಗಳ ಸುಮಾರು 400 ಹೊಸ ಸಸ್ಯಗಳೊಂದಿಗೆ ಬದಲಾಯಿಸಿ ನೆಡಲಾಯಿತು. ಬಿದಿರಿನ ಸಸ್ಯಗಳು ಇಂಗಾಲದ ಡೈಆಕ್ಸೈಡ್ ಶೇಖರಣೆ ಮಾಡುವುದರಲ್ಲಿ ಮತ್ತು ನಾಶವಾದ ಭೂಮಿಯನ್ನು ಎದುರಿಸುವಲ್ಲಿ ಒಂದು ವರವಾಗುವುದಂತೂ ಖಚಿತ. ಅವು ವೇಗವಾದ ದರದಲ್ಲಿ ಇಂಗಾಲವನ್ನು ಹೀರಿಕೊಳ್ಳಬಲ್ಲವು ಮತ್ತು ಕ್ಷೀಣಿಸಿದ, ಬರಡಾದ ಭೂಪ್ರದೇಶಗಳಲ್ಲಿ ಮಣ್ಣಿನ ಫಲವತ್ತತೆಯನ್ನು ಪುನಃ ತುಂಬಿಸಬಲ್ಲವು ಎಂಬುದನ್ನು ಸಂಶೋಧನೆಗಳ ಮೂಲಕ ಗಮನಿಸಲಾಗಿದೆ. ಇನ್ಫೋಸಿಸ್ ನಲ್ಲಿ ಭೀಮಾ ತಳಿಯ ಸುಮಾರು 32,000 ಬಿದಿರಿನ ಮರಗಳನ್ನು ಬೆಳೆಸಲಾಗಿದೆ, ಈ ಭೀಮಾ ತಳಿಯ ಬಿದಿರು ಸಾಮಾನ್ಯ ಬಿದಿರಿನ ಜಾತಿಗಿಂತ 9 ಪಟ್ಟು ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ, ಅವುಗಳು ತಮ್ಮ ತಮ್ಮಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವಿಕೆಯನ್ನು ಹೊಂದಿವೆ. 2016 ರಲ್ಲಿ, ಇನ್ಫೋಸಿಸ್ ಅವರು, ಇದೆ ಬಿದಿರಿನ ಸಹಾಯದಿಂದ ಕಾಗದ, ಪೀಠೋಪಕರಣಗಳು ಜೊತೆಗೆ ಇಂಧನ ರೂಪದಲ್ಲಿ ಕೂಡ ಶಕ್ತಿಯನ್ನು ತಯಾರಿಸುವುದು ಹಾಗೂ ಅದರ ಹೆಚ್ಚುವರಿ ಬಳಕೆಯನ್ನು ಹೇಗೆ ಮಾಡಿಕೊಳ್ಳಬಹುದು ಎಂದು ಅನ್ವೇಷಿಸುತ್ತಿದ್ದರು.


ಸೇ ಟ್ರೀಸ್ ಅಂಡ್ ಅಫೊರೆಸ್ಟ್ ಎಂಬ ಎನ್‌ಜಿಒದಿಂದ ಹುಟ್ಟು ಹಾಕಲಾದ ಒಂದು ಯೋಜನೆಯು ನಗರದಾದ್ಯಂತ ಕೆಆರ್ ಪುರಂ ಮತ್ತು ಬಾಣಸವಾಡಿಯಂತಹ ಪ್ರದೇಶಗಳಲ್ಲಿ ಮತ್ತು ದೇಶದ ಇತರ ರಾಜ್ಯಗಳಲ್ಲಿ ಮಾನವ ನಿರ್ಮಿತ "ಮಿಯಾವಾಕಿ" ಕಾಡುಗಳನ್ನು ರಚಿಸುವಲ್ಲಿ ತೊಡಗಿಸಿಕೊಂಡಿದೆ. ಈ ಕಾಡುಗಳ ವಿಶೇಷತೆ ಏನೆಂದರೆ ಮಾವು, ನುಗ್ಗೆಕಾಯಿ ಮರ, ಮುಂತಾದ ವಿವಿಧ ಜಾತಿಯ ಮರಗಳ ತೋಟಗಳು ಸಣ್ಣ ಪ್ರದೇಶಗಳಲ್ಲಿ ದಟ್ಟವಾಗಿ ಬೆಳೆಯುತ್ತವೆ, ಇದರಿಂದ ಅಲ್ಲಿ ಅವು ಸಹಬಾಳ್ವೆ ಮತ್ತು ಅಂತಿಮವಾಗಿ ಸ್ವಾವಲಂಬಿ ವ್ಯವಸ್ಥೆಯನ್ನು ತಮ್ಮೊಳಗೇ ರೂಪಿಸಿಕೊಳ್ಳುತ್ತವೆ. ಇದು ವಸತಿ ಪ್ರದೇಶಗಳಲ್ಲಿ ಖಾಲಿಯಾದ ಅಂತರ್ಜಲವನ್ನು ಪುನಃ ಬಳಕೆಗೆ ಸಿಗುವಂತೆ ಕೂಡ ಸಹಾಯ ಮಾಡಿ ಕೊಡುಗೆ ನೀಡುತ್ತದೆ. ಬೆಂಗಳೂರಿನಂತಹ ಜನನಿಬಿಡ ನಗರ ಪ್ರದೇಶಗಳಿಗೆ ಈ ಮಾದರಿಯ ಕಾಡುಗಳು ಅತಿ ಸೂಕ್ತವಾಗಿವೆ.


ಉದ್ಯಾನ ನಗರಿ ಹಾಗೂ ಅದರ ಉದ್ಯಾನವನಗಳು ಕೆಲವು ಪ್ರಮುಖ ಬದಲಾವಣೆಗಳನ್ನು ಈಗಿನ ದಿನಗಳಲ್ಲಿ ಕಂಡಿವೆ. ಉದಾಹರಣೆಗೆ, ಲಾಲ್‌ಬಾಗ್ ಬೊಟಾನಿಕಲ್(ಸಸ್ಯ ಶಾಸ್ತ್ರೀಯ ಉದ್ಯಾನ) ಗಾರ್ಡನ್ಸ್‌ನಲ್ಲಿ, ಈ ಹಿಂದೆ ಒಣಗಿದ ಎಲೆಗಳನ್ನು ಸುರಿಯಲು ಬಳಸಲಾಗಿದ್ದ ತಗ್ಗು ಪ್ರದೇಶವನ್ನು ಈಗ ಹೂವಿನ ತಾಣವಾಗಿ ಪರಿವರ್ತಿಸಲಾಗಿದೆ, ಆರ್ಕಿಡ್‌ಗಳು, ಜರೀಗಿಡಗಳು ಮತ್ತು ಕಮಲದಂತಹ ಹೂವಿನ ಸಸ್ಯಗಳನ್ನು ಈ 'ಮುಳುಗಿದ ಉದ್ಯಾನ' ದಲ್ಲಿ ನೆಡಲಾಗುತ್ತಿದೆ. ಇನ್ನೂ ಇತರ ಹಲವು ಯೋಜನೆಗಳು ತ್ಯಾಜ್ಯ ನೀರನ್ನು ಮರುಬಳಕೆಗಾಗಿ ಪರಿಣಾಮಕಾರಿಯಾದ ವಿಧಾನದಲ್ಲಿ ಬಳಸಿಕೊಳ್ಳುವ ಗುರಿಯನ್ನು ಹೊಂದಿವೆ. 'ಗ್ರೇ ಟು ಗ್ರೀನ್'(ಬೂದು ಯಿಂದ ಹಸಿರು) ಅಂತಹ ಒಂದು ಬಹು-ಸಾಂಸ್ಥಿಕ ಯೋಜನೆಯಾಗಿದೆ. ವಸತಿ ಸಮುಚ್ಚಯ (ಹೌಸಿಂಗ್ ಸೊಸೈಟಿ)ಗಳಿಂದ ಸಂಸ್ಕರಿಸಿದ ತ್ಯಾಜ್ಯನೀರಿನ ಪ್ರಸ್ತುತ ಬಳಕೆಯು ಮುಖ್ಯವಾಗಿ ಸರಿಯಾದ ರೀತಿಯಲ್ಲಿ ಸಂಗ್ರಹಣೆ ಆಗುತ್ತಿಲ್ಲ ಹಾಗೂ, ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೀರು ವ್ಯರ್ಥವಾಗುತ್ತದೆ. ಈ ಯೋಜನೆಯು ನಗರದ ವಿಕೇಂದ್ರೀಕೃತ ಸಂಸ್ಕರಣಾ ಘಟಕಗಳಿಂದ ಮಲಿನಗೊಂಡ ನೀರನ್ನು ಉಪಯುಕ್ತ ವಿಧಾನದಲ್ಲಿ ಸಂಸ್ಕರಿಸಿ, ನಂತರದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬಳಸಿಕೊಂಡು ಬೆಂಗಳೂರಿನ ಹಲವಾರು ಉದ್ಯಾನವನಗಳನ್ನು ನಿರ್ವಹಿಸಲು ಬೇಕಾಗುವ ದೊಡ್ಡ ಪ್ರಮಾಣದ ನೀರಿನ ಅಗತ್ಯವನ್ನು ಇದರಿಂದಲೇ ನಿಭಾಯಿಸುವ ಪ್ರಯತ್ನವನ್ನು ಮಾಡುತ್ತಿದೆ, ಹೀಗಾಗಿ ಎರಡೂ ಸಮಸ್ಯೆಗಳನ್ನು ಒಂದೇ ಚಲನೆಯಲ್ಲಿ ನಿಭಾಯಿಸುತ್ತ, ಒಂದೇ ಕಲ್ಲಿಗೆ ಎರಡು ಹಣ್ಣುಗಳನ್ನು ಕೆಳಗುದುರಿಸುವ ಆಲೋಚನೆ ಈ ಯೋಜನೆಯದ್ದಾಗಿದೆ. ಅದೇ ತೆರನಾದ ರೀತಿಯಲ್ಲಿ, ಸಿಟಿಜನ್ಸ್ ಫಾರ್ ಸಿಟಿಜನ್ಸ್ (C4C) ಎಂಬ ನಾಗರಿಕ ಸಂಘಟನೆಯು ಕಬ್ಬನ್ ಪಾರ್ಕ್ ಅನ್ನು ಶಬ್ದ-ರಹಿತ (ನೋ-ಹಾಂಕಿಂಗ್) ವಲಯವನ್ನಾಗಿ ಮಾಡಲು ಮನವಿ ಮಾಡಿದೆ, ಅಂದರೆ ಇಲ್ಲಿ ಯಾವುದೇ ವಾಹನಗಳು ಹಾರ್ನ್ ಮಾಡುವಂತಿಲ್ಲ, ಇದರಿಂದ ಉದ್ಯಾನದ ಸಸ್ಯ ಮತ್ತು ಪ್ರಾಣಿಗಳಿಗೆ ಸಿಗುವ ಶಾಂತಿಯುತ ಪರಿಸರ, ಅಲ್ಲಿನ ಜೀವಿಗಳಿಗೆ ಗುಣಮಟ್ಟದ ಜೀವನ ನಡೆಸಲು ಸಹಾಯವಾಗುತ್ತದೆ. ಸವಿತಾ ಸ್ವಾಮಿ, ಹರಿಣಿ ನಾಗೇಂದ್ರ ಮತ್ತು ಸೌಭದ್ರಾ ದೇವಿ ಅವರ ಅಧ್ಯಯನದಲ್ಲಿ, ಸಣ್ಣ ಉದ್ಯಾನವನಗಳಂತಹ ಹಸಿರು ಸ್ಥಳಗಳು ಜೀವವೈವಿಧ್ಯವನ್ನು ಉಳಿಸುವಲ್ಲಿ ಹಾಗೂ ಅವುಗಳ ಉತ್ತಮ ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಅತಿ ಸಹಕಾರಿಯಾಗಿದೆ ಎಂಬುದು ಸ್ಪಷ್ಟವಾಗಿದೆ.
ನಗರದ ನೈಸರ್ಗಿಕ ಚೇತನ ಮತ್ತು ಸಂಸ್ಕೃತಿಯ ಸಂರಕ್ಷಣೆ


ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ ಪ್ರಕಾರ, ನಲ್ಲೂರು ಹುಣಸೆ ತೋಪು ಮತ್ತು ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಈ ಎರಡು ಪ್ರದೇಶಗಳು ಬೆಂಗಳೂರಿನ ಜೀವವೈವಿಧ್ಯದ ಹಾಟ್‌ಸ್ಪಾಟ್‌ಗಳಾಗಿವೆ. ಜೀವವೈವಿಧ್ಯ ಪರಂಪರೆಯ ತಾಣಗಳು ಜೀವವೈವಿಧ್ಯತೆಯಲ್ಲಿ ಸಿರಿವಂತ ಪ್ರದೇಶ ಅಷ್ಟೇ ಅಲ್ಲದೇ, ಇವುಗಳು ಉಳಿದೆಲ್ಲ ಪ್ರದೇಶಗಳಿಗಿಂತ ವಿಶಿಷ್ಟ ಹಾಗೂ ಪರಿಸರದ ಸೂಕ್ಷ್ಮ ಪ್ರದೇಶಗಳಾಗಿ ಇರುತ್ತವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಜೀವವೈವಿಧ್ಯ ಸಮಿತಿಯು "ರೋರಿಚ್ ಎಸ್ಟೇಟ್" ಅನ್ನು ಕೂಡ ಜೀವವೈವಿಧ್ಯ ಪರಂಪರೆಯ ತಾಣವಾಗಿ ಗುರುತಿಸಿದೆ.


ಜೀವವೈವಿಧ್ಯದ ಜೊತೆಗೆ, ಬೆಂಗಳೂರಿನ ನಿವಾಸಿಗಳು ಪವಿತ್ರವೆಂದು ಪರಿಗಣಿಸುವ ಸಾಂಸ್ಕೃತಿಕ ಪರಂಪರೆಯೂ ಒಂದಕ್ಕೊಂದು ಮಿಳಿತವಾಗಿದೆ. ಇವೆರಡೂ ಅಂಶಗಳು ಎಂದಿಗೂ ಕೈ-ಕೈ ಹಿಡಿದು ನಡೆಯುತ್ತವೆ. ಚರ್ಚುಗಳು, ದೇವಾಲಯಗಳು ಮತ್ತು ಮಸೀದಿಗಳು ಸೇರಿದಂತೆ ನಗರದಾದ್ಯಂತ ಇರುವ ಧಾರ್ಮಿಕ ಸ್ಥಳಗಳು ತಮ್ಮ ನಡುವೆ ಸರ್ವೇ ಸಾಮಾನ್ಯವಾಗಿ ಒಂದು ಅಂಶವನ್ನು ಹೊಂದಿವೆ - ಅದು ಏನೆಂದರೆ, ಅವುಗಳು ಆಶ್ರಯ ನೀಡಿರುವ ಮರಗಳು ಮತ್ತು ಜೀವವೈವಿಧ್ಯತೆ. ಹರಿಣಿ ನಾಗೇಂದ್ರ ಅವರು ದಿ ಡೆಕ್ಕನ್ ಹೆರಾಲ್ಡ್‌ನಲ್ಲಿ ಪ್ರಕಟಣೆಗೊಂಡ ತಮ್ಮ ಲೇಖನದಲ್ಲಿ 2011 ರಲ್ಲಿ ನಗರದಾದ್ಯಂತ ಸುಮಾರು 62 ವಿವಿಧ ಪವಿತ್ರ ಸ್ಥಳಗಳಲ್ಲಿ ಅಂದಾಜು 5,500 ಕ್ಕೂ ಹೆಚ್ಚು ಮರಗಳನ್ನು ದಾಖಲಿಸುವ ಕುರಿತು ಹೇಳಿದ್ದಾರೆ. ಮರದ ದೇವಾಲಯಗಳು ಅಥವಾ ದೇವರ ಕಟ್ಟೆಗಳ ಬಗ್ಗೆ ನಡೆದ ಇತ್ತೀಚಿನ ಅಧ್ಯಯನವೊಂದು 69 ಪವಿತ್ರ ಸ್ಥಳಗಳಲ್ಲಿ ಬೇವು, ಅರಳಿ, ಹಾಗೂ ಆಲದಂತಹ ಹೆಚ್ಚುಕಡಿಮೆ 121 ಜಾತಿಯ ಮರಗಳು ಹುಲುಸಾಗಿ ಬೆಳೆಯುತ್ತಿರುವುದನ್ನು ದಾಖಲೆಯಲ್ಲಿ ನಮೂದಿಸಿದೆ. ಈ ಸ್ಥಳಗಳು ನಗರ ವನ್ಯಜೀವಿಗಳಿಗೆ ಆಶ್ರಯ ನೀಡುವುದರ ಜೊತೆಗೆ ಜನರಿಗೆ ಈ ಪ್ರದೇಶಗಳ ಮೂಲಕ ಆಳವಾದ ಸಾಮಾಜಿಕ-ಸಾಂಸ್ಕೃತಿಕ ಸಂಪರ್ಕವನ್ನು ಹೊಂದಲು ಪೂರಕವಾಗಿವೆ. ಅದು ನಗರದಾದ್ಯಂತ ಇರುವ ಯಾವುದೇ ದೇವರ ಕಟ್ಟೆಗಳಲ್ಲಿರಬಹುದು, ಹಲಸೂರಿನ ಲಕ್ಷ್ಮೀಪುರಂ ಸ್ಮಶಾನದಲ್ಲಿರಬಹುದು ಅಥವಾ 152 ವರ್ಷಗಳಷ್ಟು ಹಳೆಯದಾದ ಆಲ್ ಸೇಂಟ್ಸ್ ಚರ್ಚ್ ಕೂಡ ಆಗಿರಬಹುದು.ಇಂತಹ ಪವಿತ್ರ ಸ್ಥಳಗಳು ನಮಗೆ, ಮಾನವ ಹಾಗೂ ಅವನ ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ವನ್ಯ ಜೀವಿಗಳ ನಡುವಿನ ಸಹಬಾಳ್ವೆಯ ಪ್ರಾಮುಖ್ಯತೆಯನ್ನು ಜೊತೆಗೆ ಈ ಚಟುವಟಿಕೆಗಳಿಂದ ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಅರ್ಥ ಮಾಡಿಸಲು ಸಹಾಯ ಮಾಡುತ್ತವೆ. ಜಾಗಗಳನ್ನು ಉದ್ಯಾನವನಗಳನ್ನಾಗಿ ಪರಿವರ್ತಿಸುವ, ಕೆರೆಗಳ ಮರುನಿರ್ಮಾಣ ಮಾಡುವ ಮತ್ತು ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಇತರ ಕಾರ್ಯ ಕ್ರಮಗಳ ಮಧ್ಯೆ, ಈ ಪವಿತ್ರ ತಾಣಗಳು ಭೂತ, ವರ್ತಮಾನ ಹಾಗೂ ಭವಿಷ್ಯದ ಸಂಸ್ಕೃತಿಯ ಪೂಜ್ಯ ಸಂಕೇತವಾಗಿದ್ದು ಉದ್ಯಾನನಗರಿಯ ಅಸ್ತಿತ್ವವನ್ನು ಸಂರಕ್ಷಿಸಲು ಕೈಜೋಡಿಸುತ್ತವೆ.
ನಗರವು ಅಗಾಧವಾದ ವೇಗವಾಗಿ ಬೆಳೆಯುತ್ತಿದೆ, ಅದರೊಂದಿಗೆ ಬರುವ ಕೈಗಾರಿಕೀಕರಣದ ಬೆಳವಣಿಗೆ ಕೂಡ ಅದೇ ಮಿತಿಯನ್ನು ತೆಕ್ಕೆಗೆ ಹಾಕಿಕೊಂಡಿದೆ. ಆದರೆ 'ಅಭಿವೃದ್ಧಿ' ಯನ್ನು ಬೆನ್ನಟ್ಟಿ ಹೋಗುತ್ತಿರುವ ನಮ್ಮ ಅನ್ವೇಷಣೆಯಲ್ಲಿ, ಈ ನಗರದ ಮೂಲ ಅಡಿಪಾಯ - ನಮ್ಮ ಜೊತೆಗೆ ಈ ನಗರವನ್ನು ಹಂಚಿಕೊಂಡು ಬದುಕುತ್ತಿರುವ ಸಸ್ಯ ಮತ್ತು ಪ್ರಾಣಿಗಳನ್ನು - ಕೂಡ ಸಂರಕ್ಷಿಸಬೇಕಾಗಿದೆ. IUCN ಕೆಂಪು ಪಟ್ಟಿಯಲ್ಲಿರುವ ಅಳಿವಿನಂಚಿನಲ್ಲಿರುವ ಜೀವಿ ಪ್ರಭೇಧಗಳನ್ನಷ್ಟೇ ರಕ್ಷಿಸಿದರಷ್ಟೇ ಸಾಕಾಗುವುದಿಲ್ಲ. ಸಿಟಿಜನ್ ಮ್ಯಾಟರ್ಸ್‌ನಲ್ಲಿನ ಲೇಖನವೊಂದರಲ್ಲಿ, ಸುಬ್ರಹ್ಮಣ್ಯ ಎಸ್. ಅವರಂತಹ ಪಕ್ಷಿವಿಜ್ಞಾನಿಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂಖ್ಯೆಯಿಂದ ಮಾತ್ರ ಒಂದು ಪ್ರದೇಶದ ಜೈವಿಕ ಪ್ರಾಮುಖ್ಯತೆಯನ್ನು ನಿರ್ಧರಿಸಲಾಗುವುದಿಲ್ಲ ಎಂಬ ಅಂಶಕ್ಕೆ ಓದುಗರ ಗಮನವನ್ನು ಸೆಳೆಯುತ್ತಾರೆ, ಏಕೆಂದರೆ ಪರಿಸರ ವ್ಯವಸ್ಥೆಯ ಜಾಲದಲ್ಲಿ ಪ್ರತಿಯೊಂದು ಪ್ರಭೇದಕ್ಕೂ ಒಂದೊಂದು ನಿರ್ದಿಷ್ಟ ಪಾತ್ರವಿದೆ. ನಗರದಲ್ಲಿ ಸಾಮಾನ್ಯವಾಗಿ ಕಾಣುವ ಜೀವ ಜಾತಿಗಳನ್ನು, ಅವುಗಳು ಎಷ್ಟೇ ಸಾಮಾನ್ಯವಾಗಿದ್ದರೂ ಕೂಡ ಅವುಗಳನ್ನು ಸಂರಕ್ಷಿಸುವುದು ಅಷ್ಟೇ ಮುಖ್ಯ! ಈ ವಿಷಯದಲ್ಲಿ, ನಗರೀಕರಣದ ನೆರಳಿನಲ್ಲಿ ನಡೆಯುತ್ತಿರುವ ಈ ನಗರದ ನಿವಾಸಿಗಳಾದ ನಾವು, ನಗರದ ಜೀವವೈವಿಧ್ಯತೆಯನ್ನು ಸಂರಕ್ಷಿಸುವ ಮೂಲಭೂತ ಕಾರ್ಯದಲ್ಲಿ ನಮ್ಮದೇ ಆದ ಪಾತ್ರಗಳಿವೆ. ಅದನ್ನು ಪ್ರತಿಯೊಬ್ಬನು ಗುರುತಿಸಿ, ಅನುಸರಿಸಿವುದು ಬಹು ಮುಖ್ಯ.


ಅನೌಷ್ಕಾ ದಾಸ್‌ಗುಪ್ತ ಅವರು ಸ್ವತಂತ್ರ ವಿಜ್ಞಾನ ಬರಹಗಾರರಾಗಿದ್ದು, ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಬಿಹೇವಿಯರಲ್ ಇಕಾಲಜಿ ವಿಜ್ಞಾನದಲ್ಲಿ ಹಾಗೂ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಉತ್ಸಾಹವನ್ನು ಹೊಂದಿದ್ದಾರೆ. ಅವರ ಕೆಲಸವು "ದಿ ವೈರ್", "ದಿ ಪ್ರಿಂಟ್" ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿದೆ.


ಕನ್ನಡ ಅನುವಾದ - ಅದಿತಿ ರಾವ್


ಕನ್ನಡ ವಿಷಯ ವಿಮರ್ಶೆ - ಸವಿತಾ ಕುಮಾರ್

44 views

Comentarios


bottom of page