top of page
  • Writer's pictureAnoushka Dasgupta

ಬೆಂಗಳೂರಿನ ಒಂದು ಪಕ್ಷಿನೋಟ

ಪಕ್ಷಿವೀಕ್ಷಕ ಮತ್ತು ಸಂರಕ್ಷಣಾ ತಜ್ಞ ಡಾ. ಎಸ್. ಸುಬ್ರಹ್ಮಣ್ಯ. ಅವರು, ಒಂದಾನೊಂದು ಕಾಲದಲ್ಲಿ ಪಕ್ಷಿ ಪ್ರೇಮಿಗಳ ಸ್ವರ್ಗವಾಗಿದ್ದ ಬೆಂಗಳೂರಿನ ಬಗ್ಗೆ ನೆನಪಿಸಿಕೊಳ್ಳುತ್ತಾ, ಆಗಿನ ಮತ್ತು ಈಗಿನ ಬೆಂಗಳೂರು ನಗರದ ನೈಸರ್ಗಿಕ ಸ್ಥಿತಿ ಮತ್ತು ಪಕ್ಷಿಗಳ ಬದಲಾವಣೆಗಳಿಗೆ ಹೋಲಿಸುತ್ತಿದ್ದಾರೆ.


1972 ರಲ್ಲಿ, ಡಾ. ಜೋಸೆಫ್ ಜಾರ್ಜ್ ನೇತೃತ್ವದ 20-30 ಆಸಕ್ತಿಯುಳ್ಳ ಜನರ ಸಮೂಹ, ಬೆಂಗಳೂರು ನಗರ ಪ್ರದೇಶದ ಆಕಾಶದಲ್ಲಿ ಹಾರುತ್ತಿರುವ, ಸರೋವರಗಳು ಮತ್ತು ಮರಗಳ ಆವಾಸಸ್ಥಾನಗಳಲ್ಲಿ ವಾಸಿಸುವ ಮತ್ತು ಆಗಾಗ್ಗೆ ಬೆಂಗಳೂರಿಗೆ ಬರುವ ಪಕ್ಷಿಗಳನ್ನು ಗುರುತಿಸಲು ಒಟ್ಟು ಸೇರಿತ್ತು. ಇಂದು, ಸಾವಿರಾರು ಪಕ್ಷಿವೀಕ್ಷಕರು ಪಕ್ಷಿವೀಕ್ಷಣೆಯನ್ನು ಎತ್ತರದ ಮಟ್ಟಕ್ಕೆ ಕೊಂಡೊಯ್ದಿದ್ದಾರೆ . 1970 ರ ದಶಕದ ಬೆಂಗಳೂರಿಗೂ ಹಾಗೂ ಇಂದು ನಾವು ನೋಡುತ್ತಿರುವ ಬೆಂಗಳೂರಿಗೂ ಅಜಗಜಾಂತರ ವ್ಯತ್ಯಾಸ ಇದೆ. ನಗರದ ಹೆಸರಾಂತ ಪಕ್ಷಿಪ್ರೇಮಿಗಳಲ್ಲಿ ಒಬ್ಬರಾದ ಡಾ. ಎಸ್. ಸುಬ್ರಹ್ಮಣ್ಯ ಅವರು ಸುಮಾರು ಐದು ದಶಕಗಳ ಕಾಲ ಪಕ್ಷಿವೀಕ್ಷಕನಾಗಿದ್ದ ತಮ್ಮ ಅನುಭವಗಳನ್ನು "ಪ್ಲೇ ಇನ್ ನೇಚರ್ಸ್" ನ ಪ್ರೀತಿ ಬಂಗಾಲ್ ಮತ್ತು ಪ್ರಸಾದ್ ಸಂದ್ಭೋರ್ ಅವರೊಂದಿಗೆ ಹಂಚಿಕೊಂಡರು. ವೈವಿಧ್ಯಮಯ ಪಕ್ಷಿಗಳ ನೆಲೆ ಗೂಡಾಗಿದ್ದ ನಗರ ಈಗ ಹೇಗೆ ಬದಲಾಗಿದೆ ಎಂಬುದರ ಕುರಿತು ಅವರು ಮಾತನಾಡಿದರು. ಅವರು ಪಕ್ಷಿವೀಕ್ಷಣೆಯ ಬಗ್ಗೆ ಕೆಲವು ಸಲಹೆಗಳನ್ನು ಸಹ ಇಲ್ಲಿ ನೀಡಿದ್ದಾರೆ. ಈ ಲೇಖನವು ಈ ಸಂದರ್ಶನದ ತಿರುಳನ್ನು ಸೆರೆಹಿಡಿಯುತ್ತದೆ, ಜೊತೆಗೆ ಅದರಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ವಿಷಯಗಳ ಕುರಿತು ಹೆಚ್ಚುವರಿ ಮಾಹಿತಿ ಕೂಡ ಈ ಲೇಖನದಲ್ಲಿ ಸಿಗಲಿದೆ, ಅದರ ಜೊತೆಗೆ ಬದಲಾಗುತ್ತಿರುವ ನಗರದಲ್ಲಿ ಪಕ್ಷಿಗಳ ಭವಿಷ್ಯವು ಏನಾಗಬಹುದು ಎಂಬುದರ ಕುರಿತು ನಮಗೆ ಒಂದು ನೋಟವನ್ನು ನೀಡುತ್ತದೆ.


ಡಾ. ಎಸ್. ಸುಬ್ರಹ್ಮಣ್ಯ, ಪಕ್ಷಿವೀಕ್ಷಕರ ಸಂಘದಲ್ಲಿ 'ಸುಬ್ಬು' ಎಂದೇ ಪ್ರೀತಿಯಿಂದ ಕರೆಯಲಾಗುತ್ತದೆ, ಸುಬ್ಬು ಅವರು, ಬೇಸಿಗೆಯಲ್ಲೂಕೂಡ ತಾಪಮಾನ 32°C ಆಗಿರುವ ನಗರದ ರಮಣೀಯ, ಸರಳ ಸ್ವಭಾವವನ್ನು ನೆನಪಿಸಿಕೊಳ್ಳುತ್ತಾರೆ. ಅವರು ಮತ್ತು ನಗರದ ಇತರ ಪಕ್ಷಿಪ್ರೇಮಿಗಳು ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಂತಹ ಉದ್ಯಾನವನಗಳು, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಹೆಬ್ಬಾಳ ಕ್ಯಾಂಪಸ್‌ನಂತಹ ಸ್ಥಳಗಳು ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (IISc), ಕನಕಪುರದ ವ್ಯಾಲಿ ಶಾಲೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು, ಬನ್ನೇರುಘಟ್ಟ ಮೃಗಾಲಯದ ಪ್ರದೇಶಗಳು ಸೇರಿದಂತೆ ಬೆಂಗಳೂರಿನ ಹಲವಾರು ಪ್ರದೇಶಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು.


'ಫೀಲ್ಡ್ ಕ್ರಾಫ್ಟ್' ಪಕ್ಷಿ ವೀಕ್ಷಣೆಯ ಪ್ರಮುಖ ಭಾಗವಾಗಿತ್ತು. ಸುಬ್ಬು ಅವರ ವಿವರಣೆ ಯಂತೆ,ನೀವು ಹಕ್ಕಿಗೆ ಅಡ್ಡಿಪಡಿಸದೆ ಸಾಧ್ಯವಾದಷ್ಟು ಹತ್ತಿರ ಸಮೀಪಿಸಲು ಪ್ರಯತ್ನಿಸುತ್ತೀರಿ [ಪ್ರಯತ್ನಿಸಬೇಕು]. ಆದ್ದರಿಂದ, ಆ ಜಾಗದಲ್ಲಿ ಇರುವ ಯಾವುದೇ ಪುಟ್ಟ ಭಾಗವಾದರೂ ಸರಿ, ಅದನ್ನು ನಾವು ಹುದುಗಿಕೊಳ್ಳಲು ಬಳಸುತ್ತೇವೆ, ಅದು ಪೊದೆ ಅಥವಾ ಬಂಡೆ ಕೂಡ ಆಗಿರಬಹುದು, ಮತ್ತು ಹಕ್ಕಿಗೆ ಸಾಧ್ಯವಾದಷ್ಟು ಹತ್ತಿರದಲ್ಲಿ ಹೋಗಲು ನೆಲದ ಮೇಲೆ ಮಲಗಿ ತೆವಳುತ್ತಾ ಮುಂದೆ ಹೋಗುತ್ತೇವೆ."

ಪಕ್ಷಿವೀಕ್ಷಕರು ಆಗ ಸಾಮಾನ್ಯವಾಗಿ ದುರ್ಬೀನುಗಳನ್ನು ಬಳಸುತ್ತಿರಲಿಲ್ಲ, ಏಕೆಂದರೆ ಅವುಗಳನ್ನು ಭಾರತದ ಹೊರಗಿನಿಂದ ತರಿಸಬೇಕಾದ ಸ್ಥಿತಿ ಆಗಿತ್ತು ಹಾಗೂ ಅವುಗಳು ಇಲ್ಲಿಗೆ ಬಂದು ತಲುಪಲು ಕಷ್ಟವಾಗಿತ್ತು. ಆಗೆಲ್ಲ ಸಲೀಂ ಅಲಿ ಅವರ 'ಬರ್ಡ್ಸ್ ಆಫ್ ಇಂಡಿಯಾ' ಪುಸ್ತಕವೇ ಪ್ರಬಲ ಅಸ್ತ್ರಅದನ್ನು ಇಟ್ಟುಕೊಂಡು ಕೊನೆಯಿಲ್ಲದ ಉತ್ಸಾಹದಿಂದ, ಸುಬ್ಬು ಅವರು ಹಾಗೂ ಇತರರು ತಮ್ಮ ನೋಟ್‌ಬುಕ್‌ಗಳಲ್ಲಿ ಹಕ್ಕಿಯ ಬಗ್ಗೆ ಗಮನಿಸಿದ ಸೂಕ್ಷ್ಮ ಅಂಶಗಳನ್ನು ಮತ್ತು ಅದರ ನಡವಳಿಕೆಯನ್ನು ಬರೆದುಕೊಳ್ಳುತ್ತಾ ಪಕ್ಷಿವೀಕ್ಷಣೆ ಮಾಡುತ್ತಿದ್ದರು.


ಇಂದು, ಪಕ್ಷಿಗಳನ್ನು ಗುರುತಿಸಲು ಮತ್ತು ದಾಖಲಿಸಲು ಹಲವಾರು ಸಾಧನಗಳಿವೆ, ತಂತ್ರಜ್ಞಾನಗಳಿವೆ, ಇದರಿಂದ ಪಕ್ಷಿವೀಕ್ಷಕರ ಸಮುದಾಯವು ಕೂಡ ಬೆಳೆದಿದೆ. ಕರೋಲ್ ಇನ್‌ಸ್ಕಿಪ್, ರಿಚರ್ಡ್ ಗ್ರಿಮ್ಮೆಟ್ ಮತ್ತು ಟಿಮ್ ಇನ್‌ಸ್ಕಿಪ್ ಅವರ ಬರ್ಡ್ಸ್ ಆಫ್ ದಿ ಇಂಡಿಯನ್ ಸಬ್‌ಕಾಂಟಿನೆಂಟ್‌; ದಕ್ಷಿಣ ಏಷ್ಯಾದ ಪಕ್ಷಿಗಳು: ಪಮೇಲಾ ರಾಸ್ಮುಸ್ಸೆನ್ ಅವರ ರಿಪ್ಲಿ ಗೈಡ್ನಂತಹ ವಿವರವಾದ ಫೀಲ್ಡ್ ಗೈಡ್ಗಳು ಪಕ್ಷಿವೀಕ್ಷಕರಿಗೆ ಪಕ್ಷಿಗಳನ್ನು ಗುರುತಿಸಲು ಸಹಾಯ ಮಾಡುತ್ತಿವೆ. ಅಷ್ಟೇ ಅಲ್ಲದೆ ಆಧುನಿಕ ಕಾಲದ ತಂತ್ರಜ್ಞಾನಗಳಾದ eBird ನಂತಹ ಪ್ಲಾಟ್‌ಫಾರ್ಮ್‌ಗಳು ಹಾಗೂ ಪಕ್ಷಿಗಳನ್ನು ಗುರುತಿಸಲು ತಯಾರಿಸಿದ ಮರ್ಲಿನ್‌ ಅವರ ಕೆಲವು ಅಪ್ಲಿಕೇಶನ್‌ಗಳು ಪಕ್ಷಿವೀಕ್ಷಣೆಯ ದೃಶ್ಯವನ್ನೇ ಬದಲಿಸಿವೆ. "eBird ಪಕ್ಷಿವೀಕ್ಷಣೆಯ ಬಗ್ಗೆ ಹಾಗೂ ಪಕ್ಷಿಗಳನ್ನು ಗುರುತಿಸುವ ಕೌಶಲ್ಯಗಳನ್ನು ಜನರಲ್ಲಿ ಹೆಚ್ಚಿಸುತ್ತಿದೆ. [ಇದು] ಮುಖ್ಯವಾಗಿ ಜನರ ಕಾರ್ಯವೇ ಹೆಚ್ಚಿದೆ” ಎಂದು ಸುಬ್ಬು ಅವರು ಹೇಳುತ್ತಾರೆ, ಈ ನವೀನ ಸಾಧನಗಳು ಜನರಿಗೆ ಕೆಲವೊಮ್ಮೆ ಪರಸ್ಪರ ತಪ್ಪಾಗಿ ಗುರುತಿಸಿದ ಹಕ್ಕಿಗಳನ್ನು ಸರಿಪಡಿಸಲು, ಪಕ್ಷಿ ಜಾತಿಗಳನ್ನು ನಿಖರವಾಗಿ ಗುರುತಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಕೂಡ ಸುಬ್ಬು ಅವರು ವಿವರಿಸುತ್ತಾರೆ. ಇದಲ್ಲದೆ, ಡಿಜಿಟಲ್ ಫೋಟೋಗ್ರಫಿ ಕೂಡ ಐ. ಟಿ. ಬೂಮ್ ನಂತರ ಪಕ್ಷಿ ವೀಕ್ಷಣೆಗೆ ಹೊಸ ಆಯಾಮವನ್ನು ನೀಡಿದೆ. ಈಗಿನ ತಂತ್ರಜ್ಞಾನದಿಂದಾಗಿ ಪಕ್ಷಿ ವೀಕ್ಷಣೆಯ ರೀತಿ ನೀತಿಗಳು ಬದಲಾಗಿವೆ, ಇದು ಹಲವು ರೀತಿಯಲ್ಲಿ ವಿಕಸನಗೊಂಡಿವೆ, ಆದರೆ ಕೆಲವು ದಶಕಗಳ ಹಿಂದಿನ ಹಳೆಯ ಪದ್ಧತಿ ಹಾಗೂ ಅದರಲ್ಲಿ ಇದ್ದಂತಹ ಪಕ್ಷಿವೀಕ್ಷಣೆಯ ಉತ್ಸಾಹವು ಆಗಿನ ಪಕ್ಷಿ ವೀಕ್ಷಣೆಯಲ್ಲಿ ಸಕ್ರಿಯರಾಗಿದ್ದವರಿಗೆ ಇನ್ನೂ ಕೂಡ ಏನೋ ಒಂದು ರೀತಿಯ ಉಲ್ಲಾಸ ನೀಡುತ್ತದೆ. ಕೈಗಾರಿಕೀಕರಣದ ಮೂಲಕ ಬೆಂಗಳೂರು ಬದಲಾದ ರೀತಿಯನ್ನು ನೋಡಿದಾಗ ಈ ಬದಲಾವಣೆಯು ಕೂಡ ಹಾಗೆಯೇ ಅನ್ನಿಸುತ್ತದೆ. ನಗರದ ನೈಸರ್ಗಿಕ ಭೂದೃಶ್ಯವು ಸಂಪೂರ್ಣವಾಗಿ ಬದಲಾಗಿದೆ - ಅಭಿವೃದ್ಧಿಯ ಅನ್ವೇಷಣೆಯಲ್ಲಿ, ನಗರದಲ್ಲಿ ಇದ್ದ ಈ ಹಿಂದಿನ ಪಕ್ಷಿಧಾಮಗಳು ಕಳೆದುಹೋಗಿವೆ ಇಲ್ಲವೇ ಸಂಪೂರ್ಣವಾಗಿ ಬದಲಾಯಿಸಲ್ಪಟ್ಟಿವೆ, ಇದನ್ನು ಪಕ್ಷಿ ವೀಕ್ಷಕರು ತಾಳಲಾರದೇ ದುಃಖಿಸುತ್ತಾರೆ.


ನೀರು ನೀರು ಎಲ್ಲಿಯೂ ಇಲ್ಲ, ಕುಡಿಯಲುಒಂದು ಹನಿಯೂ ಕೂಡ ಇಲ್ಲ.

ಬೆಂಗಳೂರಿನ ಕೆರೆಗಳು ಮತ್ತು ಜೌಗು ಪ್ರದೇಶಗಳು ನೀರಿನಲ್ಲಿ ಇರುವ ವೈವಿಧ್ಯಮಯ ಪಕ್ಷಿಗಳಿಗೆ ಆತಿಥ್ಯ ವಹಿಸಿವೆ. ಮೊದಲೆಲ್ಲ ಈ ನೀರಿನಲ್ಲಿ ವಾಸಿಸುವ ಹಕ್ಕಿಗಳಿಗೆ ಅಷ್ಟೇನೂ ಮಹತ್ವ ಇರಲಿಲ್ಲ. ಆದರೆ 1987 ರಲ್ಲಿ ಪ್ರಾರಂಭವಾದ ಏಷ್ಯನ್ ಮಿಡ್‌ವಿಂಟರ್ ವಾಟರ್‌ಬರ್ಡ್ ಗಣತಿಯು ನಗರದ ಪಕ್ಷಿಪ್ರೇಮಿಗಳಿಗೆ ಜಲ ಪಕ್ಷಿಗಳನ್ನು ವೀಕ್ಷಿಸಲು ಮಹತ್ವದ ತಿರುವು ನೀಡಿತು ಹಾಗೂ ಒಂದು ಉತ್ಸಾಹ ಹುಟ್ಟಿಸಿತು ಎಂದು ಸುಬ್ಬು ಅವರು ಹೇಳುತ್ತಾರೆ, "ನಾವು 1987 ರಲ್ಲಿ ಕೇವಲ ಮೂರು ಅಥವಾ ನಾಲ್ಕು ಜೌಗು ಪ್ರದೇಶಗಳೊಂದಿಗೆ ಪ್ರಾರಂಭಿಸಿದ್ದೆವು, ಆದರೆ ಹತ್ತು ವರ್ಷಗಳ ಸಮಯದ ನಂತರದ ಒಳಗೆ ನಾವು ಬೆಂಗಳೂರು ನಗರ ಪ್ರದೇಶ ಮತ್ತು ಅದರ ಸುತ್ತಮುತ್ತ ಇರುವ 40 ಕಿಲೋಮೀಟರ್ ವ್ಯಾಪ್ತಿಯೊಳಗೆ ಬರುವ ಸುಮಾರು 100-130 ಜೌಗು ಪ್ರದೇಶಗಳನ್ನು ವೀಕ್ಷಿಸಿದ್ದೇವೆ" ಎಂದು ಸುಬ್ಬು ಅವರು ವಿಸ್ತರಿಸುತ್ತಾರೆ.


ಈ ತೇವಭೂಮಿಯ ಪಕ್ಷಿಗಳು ಜೌಗು ಪ್ರದೇಶಗಳನ್ನು ಹಾಗೂ ಅದರ ಬಗ್ಗೆ ಅರ್ಥಮಾಡಿಕೊಳ್ಳಲು ಒಂದು ಹೆಬ್ಬಾಗಿಲೇ ಆಗಿವೆ. ಸುಬ್ಬು ಅವರು ಹೇಳುತ್ತಾರೆ, "ಪಕ್ಷಿಗಳು ಅವರ ಆವಾಸಸ್ಥಾನ (ಪರಿಸರ) ದ ಆರೋಗ್ಯ, ಅವಸ್ಥೆಯನ್ನು ಗುರುತಿಸಲು ಉತ್ತಮ ಸೂಚಕಗಳಾಗಿವೆ, ಸುಮ್ಮನೆ ಆ ಜಾಗಕ್ಕೆ ಹೋಗದೆ, ಪರೀಕ್ಷೆ ಮಾಡದೇ, ಜಾಗವನ್ನು ಗಮನಿಸಿ ಅಲ್ಲಿರುವ ಹಕ್ಕಿ ಪಕ್ಷಿಗಳ ಜಾತಿ ಹಾಗೂ ಅವುಗಳ ಸಂಖ್ಯೆಯಿಂದಲೇ ಆ ಜಾಗ ಯಾವ ತರಹದ ಪ್ರದೇಶ ಎಂದು ಹೇಳಬಹುದು." ಸುಬ್ಬು ಅವರು ಇದರ ಬಗ್ಗೆ ಕೆಲವು ಆಸಕ್ತಿದಾಯಕ ಉದಾಹರಣೆಗಳನ್ನು ಉಲ್ಲೇಖಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಬೂದು-ತಲೆಯ ನೀರು ಕೋಳಿಗಳು (ಗ್ರೇ ಹೆಡೆಡ್ ಸ್ವಾಮ್ಪ್ ಹೆನ್) ಜಲಮೂಲದಲ್ಲಿನ ತೀವ್ರವಾದ ಮಾಲಿನ್ಯವನ್ನು ಸೂಚಿಸುತ್ತವೆ, ಒಳಚರಂಡಿಯ ವಿಸರಣೆಯಿಂದ ನೀರಿನ ಜೊಂಡು ಗಿಡಗಳು (ವಾಟರ್ ಹಯಸಿಂತ್) ಅಥವಾ ಅಲಿಗೇಟರ್ ಕಳೆಗಳ ಅತಿಯಾದ ಬೆಳವಣಿಗೆ ನೀರಿನ ಮೇಲೆ ಮ್ಯಾಟ್‌ಗಳ ಹಾಗೆ ಬೆಳೆಯುತ್ತದೆ. ಇಂತಹ ಪ್ರದೇಶದಲ್ಲಿ ಈ ಹಕ್ಕಿಗಳು ಸೋಂಪಾಗಿ ಜೀವಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಒಂದು ಜೌಗು ಪ್ರದೇಶದಲ್ಲಿ ಅರ್ಧ ಡಜನ್ ಕಪ್ಪು-ಬಾಲದ ಗಾಡ್ವಿಟ್ಗಳನ್ನು ಕಂಡರೆ, ನಾವು ಸುಲಭವಾಗಿ ಆ ಜಾಗವು ಒಂದು ದಿನವೂ ಕಲುಷಿತಗೊಂಡಿಲ್ಲ ಎಂಬುದನ್ನು ತಿಳಿಯಬಹುದು. ಈ ಪಕ್ಷಿಗಳು ಸರೋವರದ ತಳದಲ್ಲಿ ಸಿಗುವ ತಮ್ಮ ಮುಖ್ಯ ಆಹಾರದ ಮೂಲವಾದ ಪಾಲಿಚೈಟ್ ಹುಳುಗಳಿಗಾಗಿ ಶೋಧಿಸುತ್ತವೆ. ಹಾಗಾಗಿ ಮಾಲಿನ್ಯಗೊಂಡ ಮತ್ತು ಕೆಸರು ಶೇಖರಣೆ ಆಗಿರುವಂತ ಕೆರೆಗಳಲ್ಲಿ ಉಸಿರುಗಟ್ಟುವ ಕಾರಣ ಅಂತಹ ಜಾಗಗಳಲ್ಲಿ ಈ ಹಕ್ಕಿಗಳನ್ನು ಕಾಣಲು ಸಾಧ್ಯವೇ ಇಲ್ಲ. ಸ್ಪಷ್ಟವಾದ ನೀರಿನಿಂದ ಹೊಂದಿರುವ ಸರೋವರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಇತರ ಪಕ್ಷಿಗಳು ಎಂದರೆ ಮಿಂಚುಳ್ಳಿ (ಪೈಡ್ ಕಿಂಗ್‌ಫಿಷರ್‌) ಗಳಾಗಿದ್ದು, ಇವು ಈಜುತ್ತಿರುವ ಮೀನುಗಳನ್ನು ಹಿಡಿಯಲು ನೀರಿನ ಮೇಲೆ ಹಾರುತ್ತಾ ಇರುತ್ತವೆ ಹಾಗಾಗಿ ನೀರಿನ ಒಳಗೆ ಧುಮುಕುವ ಮೊದಲು ನೀರಿನ ಒಳಗೆ ನೋಡಲು ಸ್ಪಷ್ಟವಾದ ನೀರಿನ ತಾಣ ಇವುಗಳಿಗೆ ಬೇಕೇ ಬೇಕು. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಇದ್ದಂತಹ ಕೆರೆಗಳು, ಅವುಗಳ ಇನ್ನೊಂದು ಬದಿಯಲ್ಲಿ ಕೆಳಗಡೆ ಬೆಳೆದ ಭತ್ತದ ಗದ್ದೆಗಳನ್ನು ಸುಬ್ಬು ಅವರು ನೆನಪಿಸಿಕೊಳ್ಳುತ್ತಾರೆ. ಕೆಲವು ಹಕ್ಕಿಗಳಿಗೆ ಈ ಸಾಗುವಳಿ ಗದ್ದೆಗಳು ವಿಶೇಷವಾದ ಪರಿಸರವನ್ನು ನಿರ್ಮಿಸಿ ಕೊಡುತ್ತವೆ. ವಿಶೇಷವಾಗಿ ಹಿಂದಿನ ಹೆಬ್ಬಾಳ ಕೆರೆಯಂತಹ ಸರೋವರಗಳ ಸುತ್ತ, ಜಲಪಕ್ಷಿಗಳಿಗೆ ಹೆಚ್ಚುವರಿ ಆವಾಸಸ್ಥಾನವಾಗಿ ಕಾರ್ಯನಿರ್ವಹಿಸುತ್ತಿತ್ತು, ಇವು ಹೆಚ್ಚಾಗಿ ಗದ್ದೆಗಳಲ್ಲಿ ರಾತ್ರಿಗಳನ್ನು ಕಳೆಯುತ್ತವೆ. ಅದು ಕೂಡ ಮೊದಲು ಈ ಇಲ್ಲ ಜಲಾನಯನ ಪ್ರದೇಶಗಳು ಒಂದಕ್ಕೊಂದು ಸಂಪರ್ಕ ಹೊಂದಿದ ಕಾಲದಲ್ಲಿ ಈ ಕೆರೆಗಳಿಗೆ ಮಳೆ ನೀರು ಸರಾಗವಾಗಿ ಹರಿದು ಬರುತ್ತಿತ್ತು. ಆದರೆ ಈಗ, ಭತ್ತದ ಗದ್ದೆಗಳು ಮತ್ತು ಅವುಗಳಲ್ಲಿ ಜೀವಿಸುತ್ತಿದ್ದ ಜಲಪಕ್ಷಿಗಳು, ಅದರಲ್ಲೂ ವಿಶೇಷವಾಗಿ ಬಾತುಕೋಳಿಗಳು ಕಣ್ಮರೆಯಾಗಿವೆ ಅಷ್ಟೇ ಅಲ್ಲ ಈ ಎಲ್ಲ ಜಲಾನಯನ, ದೀರ್ಘಕಾಲಿಕ ಜೌಗು ಪ್ರದೇಶಗಳನ್ನು ಈಗ ಕಟ್ಟಡಗಳನ್ನು ಬೆಳೆಸಿ ಸಂಪೂರ್ಣವಾಗಿ ಮುಚ್ಚಿ ಹಾಕಲಾಗಿದೆ ಅದರ ಜೊತೆಗೆ ಅಲ್ಲಿರುತ್ತಿದ್ದ ಜೀವ ವೈವಿಧ್ಯವನ್ನು ಕೂಡ.


"ಒಂದಾನೊಂದು ಕಾಲದಲ್ಲಿ ಸ್ಯಾಂಡ್‌ಪೈಪರ್‌ಗಳು, ಸ್ಟಿಲ್ಟ್‌ಗಳು, ಸ್ನೈಪ್‌ಗಳು, ಸ್ಟಿಂಟ್‌ಗಳು ಮತ್ತು ಗಾಡ್‌ವಿಟ್‌ಗಳ ದೊಡ್ಡ ದೊಡ್ಡ ಸಭೆಗಳಿಗೆ ನೆಲೆಯಾಗಿದ್ದ ಈ ಸರೋವರಗಳು ಈಗ ಈ ತೀರದಲ್ಲಿ ವಾಸಿಸುವ ಹಕ್ಕಿಗಳಿಗೆ ಅನುಕೂಲಕರವಾಗಿಲ್ಲ." "ಈ ಕೆರೆಗಳ ಅಂಚುಗಳು ಹಾಗೂ ಬದಿಗಳನ್ನು ಕಲ್ಲಿನ ಗೋಡೆ ಕಟ್ಟಿ, ಆಳವಿಲ್ಲದ ನೀರಿನ ಜಾಗಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಸರೋವರಗಳನ್ನು ಒಂದೇ ರೀತಿಯಲ್ಲಿ ಕೆರೆಯ ಉದ್ದಗಲಕ್ಕೂ ಆಳಗೊಳಿಸುವ ಇಂದಿನ ಸಿವಿಲ್ ಎಂಜಿನಿಯರಿಂಗ್ ಮಾದರಿಯು ಕೆರೆಯ ತಡದ ಆಳವಿಲ್ಲದ ಜಾಗಗಳಿಗೆ ಯಾವುದೇ ಗೌರವವನ್ನು ಹೊಂದಿಲ್ಲ. ” ಎಂದು ಸುಬ್ಬು ಅವರು ದುಃಖದಿಂದ ಹೇಳುತ್ತಾರೆ.


ಹೊಸಕೋಟೆ ಕೆರೆ ಮತ್ತು ಹೆಬ್ಬಾಳ ಕೆರೆಯಂತಹ ಕೆರೆಗಳು ಬೆಳ್ಳಕ್ಕಿಗಳು, ಲಿಟಲ್ ಸ್ಟಿಂಟ್, ಟರ್ನ್‌ಗಳು ಮತ್ತು ಇತರ ಅನೇಕ ಜಲಪಕ್ಷಿಗಳಿಂದ ತುಂಬಿ ತುಳುಕುತ್ತಿದ್ದವು. ಏಪ್ರಿಲ್ 1983 ರಲ್ಲಿ ಹೆಬ್ಬಾಳ ಸರೋವರವು ಬತ್ತಿಹೋದಾಗ, ಒಣಗುತ್ತಿರುವ ಸರೋವರದ ತಳದಲ್ಲಿ ಅಳಿದು ಉಳಿದ ನೀರಿನ ಹೊಂಡಗಳು ಸುಮಾರು 2000 ಬಿಳಿ ಬೆಳ್ಳಕ್ಕಿಗಳು, 213 ಕೊಳದ ಬೆಳ್ಳಕ್ಕಿಗಳು, 28 ಬೂದು ಬಕಗಳು, 6 ಉಣ್ಣೆ-ಕುತ್ತಿಗೆಯ ಕೊಕ್ಕರೆಗಳು, 11 ಬಿಳಿ ಕೊಕ್ಕರೆಗಳು, 460 ಕಂದು ತಲೆಯ ಕೊಕ್ಕರೆಗಳು, ಸುಮಾರು 172 ಬ್ರಾಹ್ಮಿನಿ ಗಿಡುಗಗಳು, 26 ಕಪ್ಪು-ಹೊಟ್ಟೆಯ ಟರ್ನ್‌ಗಳು, 14 ರಿವರ್ ಟರ್ನ್‌ಗಳು, 1315 ಕಪ್ಪು-ರೆಕ್ಕೆಯ ಸ್ಟಿಲ್ಟ್‌ಗಳು ಮತ್ತು 2000 ಕ್ಕೂ ಹೆಚ್ಚು ಸ್ಟಿಂಟ್‌ಗಳನ್ನು ಆಕರ್ಷಿಸಿದ್ದನ್ನು ಲೆಕ್ಕ ಮಾಡಿದ್ದಾಗಿ ಸುಬ್ಬು ಅವರು ವಿವರಿಸುತ್ತಾರೆ. ಸುಬ್ಬು ಅವರು ಈಗ ಕುಖ್ಯಾತವಾಗಿ ಕಲುಷಿತಗೊಂಡ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ 25,000 ಕ್ಕೂ ಹೆಚ್ಚು ಬಾತುಕೋಳಿಗಳನ್ನು ನೋಡಿದ ಸಮಯವನ್ನು ಕೂಡ ನೆನಪಿಸಿಕೊಳ್ಳುತ್ತಾರೆ, ಇಂದಿನ ಕಾಲದಲ್ಲಿ ಈ ಸಂಖ್ಯೆಯಲ್ಲಿ ಈ ಹಕ್ಕಿಗಳನ್ನು ನೋಡುವುದು ಬಿಟ್ಟು ಊಹಿಸಲೂ ಕೂಡ ಸಾಧ್ಯವಿಲ್ಲ. ಸುಬ್ಬು ಅವರು ಜನವರಿ 1990 ರಲ್ಲಿ ಅನ್ನೇಶ್ವರದ ಬಳಿ ಒಣಗುತ್ತಿರುವ ಸರೋವರದ ನೆಲದ ಮೇಲೆ 85 ವಲಸೆ ಹೋಗುವ ಬಿಳಿ ಕೊಕ್ಕರೆಗಳನ್ನು ನೋಡಿದರು. ಇದು ಐತಿಹಾಸಿಕವಾಗಿ ಬೆಂಗಳೂರಿನಲ್ಲಿ ಹಕ್ಕಿಯ ಜಾತಿಗಳ ಅತಿದೊಡ್ಡ ಎಣಿಕೆಯಾಗಿದ್ದು ಮತ್ತು ಪಕ್ಷಿವೀಕ್ಷಕರನ್ನು ಅಪಾರವಾಗಿ ರೋಮಾಂಚನಗೊಳಿಸಿತ್ತು.


ಬರಡಾಗುತ್ತಿರುವ ಭೂಪ್ರದೇಶ.

ಕಣ್ಮರೆಯಾಗುತ್ತಿರುವ ಎಲ್ಲ ಕೆರೆಗಳು ಹಾಗೂ ಉಳಿದ ಕೆರೆಗಳು ಹೇಗೆ ದಿನ ಹೋದಂತೆ ಬೇರೆ ಜೀವಿಗಳಿಗೆ ಜೀವಿಸಲು ಕಷ್ಟ ಸಾಧ್ಯವಾದ ವಾತಾವರಣ ನಿರ್ಮಿಸಿ ಕೊಡುತ್ತೀವೇಯೋ, ಅದರ ಜೊತೆಗೆ ನಗರದ ನೈಸರ್ಗಿಕ ಭೂಪ್ರದೇಶಗಳು ಕೂಡ ಜೀವಿಗಳ ಅಳಿವಿಗೆ ವಿರುದ್ಧವಾಗಿಯೇ ಬದಲಾಗಿವೆ. ಕನಕಪುರ ರಸ್ತೆಯಲ್ಲಿರುವ ವಜ್ರಮುನೇಶ್ವರ ದೇವಸ್ಥಾನದ ಸುತ್ತಲೂ, ಬೆಂಗಳೂರು ಅರಮನೆ ಮೈದಾನ ಮತ್ತು IISc ಯ ಮೈದಾನಗಳು, ತೆರೆದ ಮೈದಾನಗಳು ಹಾಗೂ ಮುಳ್ಳು ಗಂಟಿಯ ಜಾಗಗಳನ್ನು ಹೊಂದಿದ್ದವು. ಬೆಂಗಳೂರಿನ ಇತರ ಭಾಗಗಳಂತೆ ಈ ಜಾಗಗಳ ಬಹುಪಾಲು ಈಗ ಕಣ್ಮರೆಯಾಗಿದೆ. ಮೊದಲು IISc ಕೂಡ ಜವುಗು ಪ್ರದೇಶವನ್ನು ಹೊಂದಿತ್ತು, ಅಲ್ಲಿ ಸುಬ್ಬು ಅವರು ಮತ್ತು ಇತರ ಕೆಲವು ಪಕ್ಷಿ ವೀಕ್ಷಕರು ಪಕ್ಷಿ ವೀಕ್ಷಣೆಗೆ ಭೇಟಿ ನೀಡುತ್ತಿದ್ದರು. ಸ್ಯಾಂಡ್‌ಪೈಪರ್‌ಗಳು, ಸ್ನೈಪ್‌ಗಳು ಮತ್ತು ಸಿನ್ನಮನ್ ಬಿಟರ್ನ್‌ಗಳು ಸೇರಿದಂತೆ ಸುಬ್ಬು ಅವರು ಆಗ ಕಂಡಂತಹ ಪಕ್ಷಿಗಳನ್ನು ಈಗಲೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ.


ಬೆಂಗಳೂರಿನ ಹಸಿರು ಪ್ರದೇಶಗಳು ಸಾಲು ಮರಗಳ ಜಾಲದಿಂದ ಸಂಪರ್ಕ ಹೊಂದಿತ್ತು. 80 ರ ದಶಕದ ಆರಂಭದಲ್ಲಿ, ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಮತ್ತು ಸಂರಕ್ಷಣಾವಾದಿ ಎಸ್‌. ಜಿ. ನೇಗಿನ್ಹಾಲ್ ನೇತೃತ್ವದಲ್ಲಿ ಸಾಲು ಮರಗಳನ್ನು ನೆಡುವ ಕಾರ್ಯವೊಂದು ಜರುಗಿತ್ತು. ನಗರದಲ್ಲಿ ಈ ಮರಗಳಿಂದ ಕೂಡಿದ ರಸ್ತೆಗಳು ಬಹುಮಟ್ಟಿಗೆ ಹಸಿರಿನಿಂದ ಕೂಡಿದ ಹೊದಿಕೆಗಳ ಕೊಡುಗೆಯನ್ನು ನೀಡಿವೆ, ಅದುವೆ ಬೆಂಗಳೂರಿಗೆ 'ಉದ್ಯಾನ ನಗರಿ' ಎಂಬ ಹೆಸರನ್ನು ಗಳಿಸಲು ಕಾರಣ ಕೂಡ ಹೌದು. ಐಐಎಸ್‌ಸಿ ಕ್ಯಾಂಪಸ್, ಅರಮನೆ ಮೈದಾನ, ಕಬ್ಬನ್ ಪಾರ್ಕ್, ಲಾಲ್‌ಬಾಗ್ ಮತ್ತು ಇನ್ನೂ ಹೆಚ್ಚಿನವುಗಳಂತಹ ನಗರದ ದೊಡ್ಡ ದೊಡ್ಡ ಹಸಿರು ಪ್ರದೇಶಗಳನ್ನು ಸಂಪರ್ಕಿಸುವ ಹಸಿರು ಹಾದಿಗಳಾಗಿ ಈ ಮರಗಳು ಕಾರ್ಯನಿರ್ವಹಿಸುತ್ತವೆ, ದುರದೃಷ್ಟವಶಾತ್, ರಸ್ತೆ ವಿಸ್ತರಣೆಯ ಹಾಗೂ ಬೆಳೆಯುತ್ತಿರುವ ಉದ್ಯಮಗಳಿಂದಾಗಿ, ಈ ಪ್ರಯತ್ನಗಳನ್ನು ರದ್ದುಗೊಳಿಸಲಾಗುತ್ತಿದೆ ಮತ್ತು ಹಲವಾರು ಇಂತಹ ಹಸಿರು ಪ್ರದೇಶಗಳು ರಿಯಲ್ ಎಸ್ಟೇಟ್ ಬೆಳವಣಿಗೆಯಿಂದ ನಷ್ಟವಾಗಿದೆ. ಆದಾಗ್ಯೂ ಕೂಡ IISc ಯಲ್ಲಿ, ಕೆಲವು ಹಂತದಲ್ಲಿ ಮರದ ಹೊದಿಕೆಯು ಹೆಚ್ಚಾಯಿತು, ಆದರೆ ಪೊದೆಗಳು ಮತ್ತು ಜವುಗು ಪ್ರದೇಶಗಳು ದುರದೃಷ್ಟವಶಾತ್ ಕಳೆದುಹೋಗಿವೆ.

ಈ ಹಲವಾರು ಬದಲಾವಣೆಗಳು ನಗರದಲ್ಲಿನ ಅನೇಕ ಪಕ್ಷಿ ಪ್ರಭೇದಗಳ ಸಂಖ್ಯೆ ಮತ್ತು ವೈವಿಧ್ಯತೆಯಲ್ಲಿ ಬದಲಾವಣೆಗಳಿಗೆ ಕಾರಣವಾಗಿವೆ.


ಬದಲಾಗುತ್ತಿರುವ ಜೀವನಶೈಲಿಯ ಜೊತೆಗೆ , ಪಕ್ಷಿ ಸಂಕುಲದ ಬದಲಾವಣೆ.

ನಗರದ ಮೂಲಸೌಕರ್ಯದಲ್ಲಿನ ಬದಲಾವಣೆಗಳ ಜೊತೆಗೆ, ನಗರದ ಜನ ಜೀವನ ವಿಧಾನ ಮತ್ತು ನಗರದ ನಿವಾಸಿಗಳು, ಅವರ ವಸಾಹತು ಮಾದರಿಗಳು ಸಹ ಬದಲಾವಣೆಗೆ ಒಳಗಾಗಿವೆ. ಇದರಿಂದ ನಗರದ ಪಕ್ಷಿಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ನಿಗರ್ವಿ ಗುಬ್ಬಚ್ಚಿಗಳು ಮತ್ತು ಮೈನಾಗಳು ಸಹ ಈ ಬದಲಾವಣೆಗಳ ಭಾರವನ್ನು ಎದುರಿಸುತ್ತಿವೆ. ಸುಬ್ಬು ಅವರು 70 ಮತ್ತು 80 ರ ದಶಕದಲ್ಲಿ ನಗರದಾದ್ಯಂತ ಹೇರಳವಾಗಿರುವ ಗುಬ್ಬಚ್ಚಿಗಳ ಸಂಖ್ಯೆಯ ಬಗ್ಗೆ ಮಾತನಾಡುತ್ತಾರೆ. ಸ್ಥಳೀಯವಾಗಿ ಅವರೆ ಕಾಯಿ ಎಂದು ಕರೆಯಲ್ಪಡುವ ಜನಪ್ರಿಯ ಗದ್ದೆಯಲ್ಲಿ-ಬೀನ್ಸ್ನ ಬೀಜಗಳನ್ನು ಬೇಡವೆಂದು ಬಿಸಾಡಿದ ನಂತರ ಅವುಗಳನ್ನು ತಿನ್ನಲು ಕುಣಿಯುತ್ತ ಬರುತ್ತಿದ್ದ ಗುಬ್ಬಿ ಹಾಗೂ ಮೈನಾಗಳು ಲಾರ್ವಾಗಳನ್ನು ಹುಡುಕಲು ಮನೆಗಳಿಗೆ ಭೇಟಿ ನೀಡುತ್ತಿದ್ದ ಸಮಯವನ್ನು ಸುಬ್ಬು ಅವರು ವಿವರಿಸುತ್ತಾರೆ. ಅಡುಗೆ ಮನೆಯ ಗಾರ್ಡನ್‌ಗಳಲ್ಲಿ ಸಹ ಈ ಹಕ್ಕಿಗಳು ಸಾಮಾನ್ಯವಾಗಿದ್ದವು, ಗುಬ್ಬಚ್ಚಿಗಳು ಮತ್ತು ಮೈನಾಗಳನ್ನು ಅಡುಗೆಮನೆಯಿಂದ ತೋಟಕ್ಕೆ ತೊಳೆದು ಹೋಗುವ ನೀರಿನಲ್ಲಿ ಸಿಗುವ ಆಹಾರದ ಅವಶೇಷಗಳ ಸಣ್ಣ ತುಂಡುಗಳನ್ನು ತಿನ್ನಲು ಬರುತ್ತಿದ್ದವು. ಆದಾಗ್ಯೂ, ಈಗ ಬದಲಾಗುತ್ತಿರುವ ಜೀವನ ವಿಧಾನ ಮತ್ತು ಜನರ ಗಮನ ಪ್ಯಾಕೇಜ್ ಮಾಡಿದ ತರಕಾರಿಗಳ ಅನುಕೂಲಗಳತ್ತ ಸಾಗುತ್ತಿರುವಾಗ, ಹಾಗೂ ಅಡುಗೆಮನೆಯ ತ್ಯಾಜ್ಯ ನೀರು ಕೂಡ ಈಗ ಕೊಳಚೆ ನೀರು ಸಂಸ್ಕರಣಾ ಘಟಕಗಳಿಗೆ ಪೈಪ್‌ಲೈನ್‌ ಮೂಲಕ ಹರಿದು ಹೋಗುವುದರಿಂದ ಅಂತಹ ಆಹಾರ ಸಂಪನ್ಮೂಲಗಳು ಕೂಡ ಕಳೆದುಹೋಗಿವೆ. ಅದರ ಜೊತೆಗೆ ಅಡುಗೆ ಮನೆಯಲ್ಲಿ ಗಾರ್ಡನ್‌ ಇರುವುದೂ ಒಂದು ಐಷಾರಾಮಿ ಜೀವನದ ಸಂಕೇತ ಆಗಿಬಿಟ್ಟಿದೆ.


ಕಿವಿಗೆ ಹಿತವಾಗುವ ಪಕ್ಷಿಗಳ ಕಲರವ

ಇಷ್ಟೆಲ್ಲಾ ಕಳೆದು ಹೋಗಿದೆ ಆದರೂ ಕೂಡ ಬೆಂಗಳೂರಿನ ಪಕ್ಷಿಗಳ ಲೋಕದಲ್ಲಿ ಎಲ್ಲವೂ ಕಳೆಗುಂದಿಲ್ಲ ಮತ್ತು ಖಾಲಿಯಾಗಿಲ್ಲ. ಕೆಲವು ಪಕ್ಷಿಗಳು ಈ ಎಲ್ಲ ಬದಲಾವಣೆಗಳನ್ನು ಎದುರಿಸಿ ಚೆನ್ನಾಗಿಯೇ ಬೆಳೆದು ಬಂದಿವೆ. ಸುಬ್ಬು ಅವರ ಪ್ರಕಾರ, ಅಂತಹ ಕೆಲವು ಜಾತಿಗಳಲ್ಲಿ ಬೂದಿ ಪ್ರಿನಿಯಾಗಳು ಮತ್ತು ನವಿಲುಗಳು ಕೂಡ ಸೇರಿವೆ. ಜಿ.ಕೆ.ವಿ.ಕೆ ಕ್ಯಾಂಪಸ್‌ನಲ್ಲಿ 80 ರ ದಶಕದ ಮೊದಲು ಎಂದೂ ಕಾಣದೇ ಇದ್ದ ನವಿಲುಗಳ ಈಗಿನ ಸಂಖ್ಯೆಯಲ್ಲಿನ ಹೆಚ್ಚಳದ ಬಗ್ಗೆ ಅವರು ಆಶ್ಚರ್ಯ ಪಡುತ್ತಾರೆ. ಈಗ, ಆ ನವಿಲುಗಳಲ್ಲಿ ಸುಮಾರು 60-70 ಹಕ್ಕಿಗಳು ಕ್ಯಾಂಪಸ್‌ನಲ್ಲಿ ಸ್ವೇಚ್ಛೆಯಿಂದ ತಿರುಗಾಡುತ್ತ ಇರುತ್ತವೆ ಎಂದು ಸುಬ್ಬು ಅವರು ಹೇಳುತ್ತಾರೆ. ಅವರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸದೇ ಹಾಗೂ ಬೇಟೆಯಾಡದೇ ಇರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಸುಬ್ಬು ಅವರು.ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ಗಳು ಅಣಬೆಗಳಂತೆ ಹುಟ್ಟಿಕೊಂಡಿದ್ದು, ಬೆಂಗಳೂರಿನಲ್ಲಿ ಬಾರ್ನ್ ಗೂಬೆಗಳ ಸಂಖ್ಯೆಯೂ ಹೆಚ್ಚುತ್ತಿದೆ. 1994 ರ ಮೊದಲು ಕೇವಲ 5 ದಾಖಲೆಗಳನ್ನು ಹೊಂದಿದ್ದ ಈ ಜಾತಿಯ ಹಕ್ಕಿಯು ಅಪಾರ್ಟ್ಮೆಂಟ್ ಕಟ್ಟಡಗಳು ಬೆಳೆದಂತೆ ಅವುಗಳ ಸುತ್ತಲೂ ತಾನೂ ಕೂಡ ಬೆಳೆಯುತ್ತ ಬರಲು ಪ್ರಾರಂಭಿಸಿತು. ಕಟ್ಟಡಗಳು ಹೆಚ್ಚು ಹೆಚ್ಚು ಇಲಿಗಳನ್ನು ಹಾಗೂ ಕಸದ ಸಂಗ್ರಹವನ್ನು ಹೊಂದಿದ್ದು, ರಾತ್ರಿಯ ಸಮಯದಲ್ಲಿ ಅವುಗಳನ್ನು ಬೇಟೆಯಾಡುವ ಬಾರ್ನ್ ಗೂಬೆಗಳಿಗೆ ಈ ಪರಿಸ್ಥಿತಿ ತಟ್ಟೆಯಲ್ಲಿ ಊಟ ಹಾಕಿ ಕೊಟ್ಟಂತೆ ಆಗಿದೆ. ವಸತಿ ಪ್ರದೇಶಗಳಲ್ಲಿ ಅವುಗಳ ಸಂಖ್ಯೆ ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ, ಸುಬ್ಬು ಅವರು ಒಂದು ದಶಕದ ಹಿಂದೆ ಜನರಿಗೆ ಬಾರ್ನ್ ಗೂಬೆಗಳ ಬಗ್ಗೆ ಮಾರ್ಗದರ್ಶನ ಮತ್ತು ಶಿಕ್ಷಣ ನೀಡಲು ಹಾಗೂ ಅವರ ನೆರೆಹೊರೆಯ ಜಾಗದಲ್ಲಿ ಕಾಣುವ ಪಕ್ಷಿ ಜಾತಿಗಳ ಬಗ್ಗೆ ತಪ್ಪು ಕಲ್ಪನೆಯನ್ನು ದೂರವಾಗಿಸಲು 'ಬೆಂಗಳೂರು ಬಾರ್ನ್ ಗೂಬೆ ಸಂರಕ್ಷಣಾ ತಂಡ' ಎಂಬ ಸಂಘವನ್ನು ಪ್ರಾರಂಭಿಸಿದರು.


ಬದಲಾಗುತ್ತಿರುವ ಭೂದೃಶ್ಯಗಳೊಂದಿಗೆ ಸಹ, ಕೆಲವು ಪಕ್ಷಿಗಳು ದಿನೇ ದಿನೇ ಬದಲಾಗುತ್ತಿರುವ ಈ ಹೊಸ ರಚನೆಗಳಲ್ಲಿ ನೆಮ್ಮದಿ ಹಾಗೂ ಸಾಂತ್ವನವನ್ನು ಕಂಡುಕೊಂಡಿವೆ, ಆದರೆ ಕೆಲವು ಹಳೆಯ ನೆನಪುಗಳು ಜೊತೆಗೆ ಇನ್ನೂ ಉಳಿದಿವೆ. ಎರಡನೆಯದಾಗಿ, ಸುಬ್ಬು ಅವರು ಮಧುರೆ ಕೆರೆ ಸರೋವರಗಳಂತಹ ಸರೋವರಗಳನ್ನು ಸೂಚಿಸುತ್ತಾರೆ ಏಕೆಂದರೆ, ಇದು ಸ್ಯಾಂಡ್‌ಪೈಪರ್‌ಗಳು ಮತ್ತು ರೆಡ್‌ಶಾಂಕ್‌ಗಳಂತಹ ಪಕ್ಷಿಗಳ ಸಂಖ್ಯೆಯನ್ನು ಇನ್ನೂ ಕೂಡ ಉಳಿಸಿಕೊಂಡಿದೆ. ಹೆಸರಘಟ್ಟ ಸರೋವರವು ಈಗಲೂ ಆಳವಿಲ್ಲದ ಸರೋವರದ ದಡವನ್ನು ಹೊಂದಿದೆ, ಅಷ್ಟೇ ಅಲ್ಲ ಬಾಕಿ ಕೆರೆಗಳಿಗೆ ಹೋಲಿಸಿದಾಗ ಕಡಿಮೆ ಕಲುಷಿತವಾಗಿದೆ. ಇದರ ಪರಿಣಾಮವಾಗಿ ಇನ್ನೂ ಅದ್ಭುತವಾದ ಪಕ್ಷಿಗಳ ಸ್ವರ್ಗವಾಗಿದೆ. ಇದು ತೆಳ್ಳಗಿನ ಕೊಕ್ಕಿನ ಗಲ್‌ಗಳು ಮತ್ತು ವೇಡರ್‌ಗಳಂತಹ ವಲಸೆ ಹಕ್ಕಿಗಳನ್ನು ತನ್ನ ಮಡಿಲಲ್ಲಿ ಸಲಹುತ್ತಿದೆ. 90 ರ ದಶಕದ ಮಧ್ಯಭಾಗದಿಂದ ವಾಣಿಜ್ಯ ರೂಪದ ಮೀನುಗಾರಿಕೆ ಶುರುವಾದಾಗಿನಿಂದ ಸರೋವರಗಳಲ್ಲಿ ಈ ಹಿಂದೆ ಅಪರೂಪದಲ್ಲಿ ಕಾಣುತ್ತಿದ್ದ ಮೀನು ಪ್ರಭೇದಗಳಾದ ಟಿಲಾಪಿಯಾ, ಮೃಗಾಲ್, ಕ್ಯಾಟ್ಲಾ ಮತ್ತು ರೋಹುಗಳ ಪ್ರವೇಶಕ್ಕೆ ಕಾರಣವಾಯಿತು. ಈ ಬದಲಾವಣೆ ಮೊದಲು ಬೆಂಗಳೂರಿನಲ್ಲಿ ಅಪರೂಪವಾಗಿದ್ದ ದೊಡ್ಡ ಕಾರ್ಮೊರಂಟ್‌ (ನೀರು ಕಾಗೆ) ಗಳು, ಡಾರ್ಟರ್‌ಗಳು ಮತ್ತು ಸ್ಪಾಟ್-ಬಿಲ್ಡ್ ಪೆಲಿಕಾನ್‌ಗಳಂತಹ ಹೆಚ್ಚಿನ ಸಂಖ್ಯೆಯ ಮೀನು-ಹಾರಿ ಜಾತಿಯ ಪಕ್ಷಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸಿತು. ಈ ಎಲ್ಲ ಬದಲಾವಣೆಗಳ ನಡುವೆಯೂ ಬೆಂಗಳೂರಿನ ಕೆಲ ಹಕ್ಕಿಗಳು ಈ ನಗರದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿವೆ. ಮೊದಲಿನ ಕಾಲಕ್ಕೆ ಸುಬ್ಬು ಅವರು ಬಿಳಿ ಕೆನ್ನೆಯ ಬಾರ್ಬೆಟ್ ಅನ್ನು 'ಬೆಂಗಳೂರಿನ ಪಕ್ಷಿ' ಎಂದು ಕರೆಯುತ್ತಾರೆ, ಏಕೆಂದರೆ ನಗರದಾದ್ಯಂತ ಹಸಿರು ಮೇಲಾವರಣಗಳಲ್ಲಿ ಈ ಪಕ್ಷಿಗಳ ಕುಟ್ರೂ ಕೂಗು ನಿರಂತರವಾಗಿ ಕೇಳುತ್ತಿತ್ತು. ಬೆಂಗಳೂರು ನಗರವು, ಚಳಿಗಾಲ ಆಗಮಿಸಿದಾಗ, ಬ್ರೌನ್ ಶ್ರೈಕ್‌ಗಳ ಕೂಗಿನಿಂದ ಪ್ರತಿಧ್ವನಿಸುತಿತ್ತು. ಈಗ ನೋಡಿದರೆ ನಗರಾಭಿವೃದ್ಧಿಯ ಈ ಕರ್ಕಶ ಕೇಕೆಯನ್ನು ಸಲ್ಪ ಸಮಯಕ್ಕೆ ನಿಲ್ಲಿಸಿ, ನಾವು ಕೂಡ ಹಂಚಿಕೊಳ್ಳುವ ಈ ನಗರದ ಬಗ್ಗೆ ಪಕ್ಷಿಗಳು ಏನು ಹೇಳುತ್ತವೆ ಎಂಬುದನ್ನು ಕೇಳಲು ಅವಕಾಶಗಳನ್ನು ಸೃಷ್ಟಿಸಲು ಇದು ಉತ್ತಮ ಸಮಯ ಎಂದು ಅನಿಸುತ್ತದೆ.


ಭವಿಷ್ಯದತ್ತ ನೋಡುತ್ತಾ,

ಬೆಂಗಳೂರಿನ ಪಕ್ಷಿಗಳ ಭವಿಷ್ಯವು ಸೂಕ್ಷ್ಮವಾದ ಸಮತೋಲನ ಕಾಯ್ದುಕೊಂಡಿದೆ. ಸುಬ್ಬು ಅವರು ಹೇಳುತ್ತಾರೆ, “ಬೆಂಗಳೂರು ಈಗಿರುವುದಕ್ಕಿಂತ ಮತ್ತೂ ಹೆಚ್ಚು ಬೆಳೆಯಲಿದೆ, ಬಹುಶಃ ಆಕಾಶದತ್ತ ಕೂಡ, ಇನ್ನೂ ಹೆಚ್ಚಿನ ಹಸಿರು ಸ್ಥಳಗಳು ಕಳೆದು ಹೋಗುತ್ತವೆ. ನೀವು ಸಂರಕ್ಷಿಸಬಹುದಾದ ಯಾವುದೇ ಹಸಿರು ಸ್ಥಳಗಳು ಇರಲಿ ಅವುಗಳು ದ್ವೀಪಗಳ ರೂಪದಲ್ಲಿರುತ್ತವೆ, ಏಕೆಂದರೆ ಈ ಹಸಿರು ಸ್ಥಳಗಳಾಗಿ ಗುರುತಿಸಿ ಕೊಡುವ ಸಾಲು ಮರಗಳನ್ನೇ ನಾವು ಕಳೆದುಕೊಳ್ಳುತ್ತೇವೆ. ಇದರಿಂದ ಉಳಿದ ಹಸಿರು ಜಾಗಗಳ ಮೇಲೆ ಅನಗತ್ಯ ಒತ್ತಡವನ್ನು ಹೇರಬೇಕಾಗುತ್ತದೆ. "


ಸುಬ್ಬು ಅವರು ಭವಿಷ್ಯ ನುಡಿಯುತ್ತಾ ಹೇಳುತ್ತಾರೆ, “ಈ ಹಸಿರು ದ್ವೀಪಗಳಲ್ಲಿ ಬದುಕಬಲ್ಲ ಜಾತಿಗಳು ಮಾತ್ರ ಮುಂದೆ ಉಳಿದುಕೊಳ್ಳುತ್ತವೆ." ಆದರೆ ಈಗಿರುವ ಹಾಗೂ ಹೆಚ್ಚು ವಿಶಾಲವಾದ ಸ್ಥಳಗಳ ಅಗತ್ಯವಿರುವ ಪಕ್ಷಿ ಪ್ರಭೇಧಗಳು ದೀರ್ಘಕಾಲ ಉಳಿಯದೆ ಇರಬಹುದು. ಸುಬ್ಬು ಅವರು 80 ರ ದಶಕದಲ್ಲಿ ಲಾಲ್ಬಾಗ್ನಲ್ಲಿ ಕಾಣುತ್ತಿದ್ದ ಓಸ್ ಪ್ರೇ ಮತ್ತು ಮಾರ್ಷ್ ಹ್ಯಾರಿಯರ್ಗಳ ಉದಾಹರಣೆಯನ್ನು ನೀಡುತ್ತಾರೆ. ಆಗ ಸುಬ್ಬು ಅವರು ಲಾಲ್‌ಬಾಗ್ ಸರೋವರಕ್ಕೆ ಬರುತ್ತಿದ್ದ ಸುಮಾರು 1000 ರಿಂದ 2000 ಗಾರ್ಗೇನಿ ಬಾತುಕೋಳಿಗಳನ್ನು ಸಹ ಸುಲಭದಲ್ಲಿ ಕಾಣುತ್ತಿದ್ದರು, ಆದರೆ ಈಗ ಆ ಪ್ರದೇಶವು ತುಂಬಾ ತೊಂದರೆಗೀಡಾಗಿರುವುದರಿಂದ ಅವು ಇನ್ನು ಮುಂದೆ ಕಂಡುಬರುವುದಿಲ್ಲ. ಮತ್ತೊಂದೆಡೆ, ಸುಬ್ಬು ಅವರ ಪ್ರಕಾರ, ಕಾರ್ಮೊರಂಟ್‌ಗಳು ಮತ್ತು ಕೊಳದ ಬೆಳ್ಳಕ್ಕಿಗಳಂತೆ ಹೊಂದಿಕೊಳ್ಳಬಲ್ಲ ಕೆಲವು ಪ್ರಭೇದಗಳು ಸ್ವಲ್ಪ ಮಟ್ಟಿಗೆ ಈ ನಗರ ಗತಿ ಬದಲಾವಣೆಗಳಿಗೆ ತಕ್ಕಾಗಿ ಬದುಕಬಲ್ಲವು.


ಬೆಂಗಳೂರು ನಗರದ ಜನ ನಿವಾಸಿಗಳು ಈ ಪಕ್ಷಿ ಪ್ರಭೇಧಗಳಿಗೆ ಬದುಕಲು ಸಹಾಯ ಮಾಡಲು ಕೆಲವು ಸರಳ ಮಾರ್ಗಗಳಿವೆ. ಅಲ್ಪಸ್ವಲ್ಪ ಜಾಗವಿದ್ದರೂ ಸರಿ, ಹಣ್ಣಿನ ಮರಗಳು, ಪೊದೆಗಳು, ಮಕರಂದವನ್ನು ನೀಡುವ ಮತ್ತು ಪಕ್ಷಿಗಳನ್ನು ಆಕರ್ಷಿಸುವ ಸಸ್ಯಗಳನ್ನು ಬೆಳೆಸಬಹುದು ಎಂದು ಸುಬ್ಬು ಅವರು ಸಲಹೆ ನೀಡುತ್ತಾರೆ. ಜೊತೆಗೆ ಸುಬ್ಬು ಅವರು ಹೇಳುತ್ತಾರೆ, "ನೀರು ಬಹಳ ವಿರಳ ಸಂಪನ್ಮೂಲವಾಗಿದೆ ಏಕೆಂದರೆ ಕೊಳಚೆನೀರಿನ ಕಲುಷಿತ ಕೆರೆಗಳು ಉತ್ತಮ ಗುಣಮಟ್ಟದ ನೀರನ್ನು ಹಿಡಿದಿಟ್ಟು ಕೊಳ್ಳುವುದಿಲ್ಲ. ನಿಮ್ಮ ತೋಟದಲ್ಲಿ ಶುದ್ಧ ನೀರನ್ನು ನೀವು ಒದಗಿಸಿದ್ದೆ ಹೌದಾದಲ್ಲಿ ಪಕ್ಷಿಗಳು ಆಯಸ್ಕಾಂತಕ್ಕೆ ಕಬ್ಬಿಣದ ತುಂಡುಗಳು ಆಕರ್ಷಿತಗೊಂಡಂತೆ ಆಕರ್ಷಿತವಾಗುತ್ತವೆ". ಇದು ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಸುಲಭವಾಗಿ ಮಾಡಬಹುದಾದ ಕೆಲಸ. ನಾವು ಸಹ ಸಾಧ್ಯವಾದಷ್ಟು ಹಸಿರು ಹೊದಿಕೆಯನ್ನು ಹೆಚ್ಚಿಸುವ ಮತ್ತು ಪಕ್ಷಿಗಳಿಗೆ ಇರಲು ಅನುಕೂಲಕರವಾದ ಸ್ಥಳಗಳನ್ನು ಮಾಡಿ ಕೊಡಲು ಪ್ರಯತ್ನಿಸಬೇಕು. ವಾಸ್ತವವಾಗಿ, ಅವರು GKVK ಕ್ಯಾಂಪಸ್ ಅನ್ನು ಜೈವಿಕ ವೈವಿಧ್ಯತೆಯ ಪರಂಪರೆ ತಾಣವೆಂದು ಘೋಷಿಸುವ ದೀರ್ಘ ಪ್ರಕ್ರಿಯೆಯಲ್ಲಿ ಕೂಡ ಭಾಗಿಯಾಗಿದ್ದರು, ಇದರಿಂದ ಮಾನವನ ಹಸ್ತಕ್ಷೇಪದಿಂದ ಮಲಿನ ಆಗುತ್ತಿರುವ ಜಾಗವನ್ನು, ಅಸ್ಪೃಶ್ಯವಾಗಿ, ಮನುಷ್ಯರ ಕೈ ಇಂದ ದೂರವಾಗಿಸಿ ಉಳಿಸಬಹುದು ಎಂಬುದನ್ನು ತಿಳಿಸುತ್ತದೆಅಂತಹ ಬದಲಾವಣೆಗಳನ್ನು ತರಲು ಮತ್ತು ನಗರದಲ್ಲಿ ಉಳಿದಿರುವ ಪಕ್ಷ ಪ್ರಭೇಧಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವ ಕ್ರಮಗಳನ್ನು ಕೈಗೊಳ್ಳಲು ಹಾಗೂ ನಗರದಲ್ಲಿನ ವಿವಿಧ ಪಕ್ಷಿಗಳ ಜನಸಂಖ್ಯೆಗೆ 'ಪಕ್ಷಿಗಳ ರಿಯಲ್ ಎಸ್ಟೇಟ್' ಒದಗಿಸುತ್ತಿದ್ದ ಬೆಂಗಳೂರಿಗೆ ತನ್ನ ಆ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಸಹಾಯ ಮಾಡಲು ಮೊದಲ ಆದ್ಯತೆ ನೀಡಬೇಕಾಗಿದೆ. ಸುಬ್ಬು ಅವರು ಎಚ್ಚರಿಕೆ ನೀಡುವಂತೆ, "ನಾವು ಈ ರೀತಿ ಮಾಡದಿದ್ದರೆ, ಪಕ್ಷಿಗಳನ್ನು ವೀಕ್ಷಿಸಲು ನಾವು ಬೆಂಗಳೂರಿನಿಂದ ಮತ್ತಷ್ಟು ದೂರದ ಜಾಗಗಳನ್ನು ಹುಡುಕಿ ಹೋಗಬೇಕಾಗುತ್ತದೆ."ಅನೌಷ್ಕಾ ದಾಸ್‌ಗುಪ್ತಾ ಅವರು ಮಹತ್ವಾಕಾಂಕ್ಷಿ ಸಂಶೋಧಕಿ ಮತ್ತು ಸ್ವತಂತ್ರ ವಿಜ್ಞಾನ ಬರಹಗಾರರಾಗಿದ್ದಾರೆ, ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಮತ್ತು ಪರಿಸರ ನಡುವಳಿಕೆಯ ಬಗ್ಗೆ ತಿಳಿಯಲು (ಬಿಹೇವಿಯರ್ ಇಕೋಲಜಿ ) ಹಾಗೂ ಅದರ ಸಂರಕ್ಷಣೆಗಾಗಿ ಉತ್ಸಾಹವನ್ನು ಹೊಂದಿದ್ದಾರೆ. ಅವರ ಕೆಲಸವು ದಿ ವೈರ್, ದಿ ಪ್ರಿಂಟ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿದೆ.10 views

Comments


bottom of page