-ಅನೌಷ್ಕಾ ದಾಸ್‌ಗುಪ್ತಾ
ಬೆಂಗಳೂರಿನಂತಹ ಕಾಂಕ್ರೀಟ್ ಕಾಡಿನಲ್ಲಿ ಪಕ್ಷಿಗಳ ಸ್ವರಮೇಳವು ಕೇಳುವವರ ಕಿವಿಗೆ ಅಕ್ಷರಶಃ ಸಂಗೀತವೇ ಸೈ. ನಗರದ ಸುತ್ತಲೂ ಅಂತಹ ಹಾರಾಡುವ ಪಕ್ಷಿಗಳ ಕಲಹಕ್ಕೆ ಬೆಂಗಳೂರು ಆತಿಥ್ಯ ವಹಿಸುತ್ತದೆ. ಈ ಲೇಖನವು 'ಬರ್ಡ್ಸ್ ಇನ್ ದಿ ಸಿಟಿ: ಬೆಂಗಳೂರು ಎಡಿಷನ್' ಬೋರ್ಡ್ ಗೇಮ್‌ನಲ್ಲಿ ಕಂಡುಬರುವ ಪಕ್ಷಿಗಳು ಮತ್ತು ಅವುಗಳಲ್ಲಿ ಅಡಗಿರುವ ಚಮತ್ಕಾರಗಳ ಮೇಲೆ ಬೆಳಕು ಚೆಲ್ಲುತ್ತದೆ.
ಗೊರವಂಕ / ಮೈನಾ ಹಕ್ಕಿ (ಅಕ್ರಿಡೋಥಿರಸ್ ಟ್ರಿಷ್ಟಿಸ್)
ಗೊರವಂಕ / ಮೈನಾ ಹಕ್ಕಿ (Image courtesy: sarangib/Creative Commons License/Pixabay)
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಕಂದು ಬಣ್ಣದ ಮೈನಾ, ದಶಕಗಳಿಂದ ಬೆಳೆಯುತ್ತಲೇ ಬಂದಿರುವ ನಗರಕ್ಕೆ ಹೊಂದಿಕೊಂಡಿದೆ. ಹೊಳಪುಳ್ಳ ಕಪ್ಪು ತಲೆ, ಬಿಳಿಯ ಬಾಲದ ತುದಿಗಳು ಮತ್ತು ರೆಕ್ಕೆಯ ಒಳಪದರಗಳು ಮತ್ತು ವಿಶಿಷ್ಟವಾಗಿ ಪ್ರಕಾಶಮಾನವಾದ ಹಳದಿ ಕೊಕ್ಕು, ಕಾಲುಗಳು ಮತ್ತು ಕಣ್ಣುಗಳ ಸುತ್ತಲಿನ ಜಾಗದೊಂದಿಗೆ, ಈ ಹಕ್ಕಿ ಸ್ನೇಹಪರವಾದ ನೆರೆಹೊರೆಯ ಪಕ್ಷಿಯಾಗಿದ್ದು ಅದು ತನ್ನ ಜೋರಾದ ಕರೆಗಳೊಂದಿಗೆ ತನ್ನ ಇರುವನ್ನು ಜಗತ್ತಿಗೆ ತೋರಿಸುತ್ತದೆ. ಈ ಕರೆಗಳು ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತವೆ - ಸಂಭಾವ್ಯ ಸಂಗಾತಿಗಳನ್ನು ಓಲೈಸಲು ಸುಮಧುರ ಹಾಡುಗಳ ಜೊತೆ ಸಂದರ್ಭ ಬಂದಾಗ ಕಠಿಣ ಎಚ್ಚರಿಕೆಯ ಕರೆಗಳನ್ನು ಕೂಡ ಕೊಡಬಲ್ಲದು.
ಏಷ್ಯಾಕ್ಕೆ ಸ್ಥಳೀಯ ಪಕ್ಷಿಯೇ ಆಗಿದ್ದರೂ ಕೂಡ, ಈ ಪ್ರಭೇದವು ಪ್ರಪಂಚದ ಹಲವು ಭಾಗಗಳಲ್ಲಿ ಹರಡಿದೆ, ಅಷ್ಟೇ ಅಲ್ಲದೇ ಅವುಗಳನ್ನು ಕೆಲವು ಜಾಗಗಳಲ್ಲಿ ಆಕ್ರಮಣಕಾರಿ ಪ್ರಭೇದವೆಂದು ಪರಿಗಣಿಸಲಾಗಿದೆ. ಅತಿ ಬೇಗನೆ ಹೊಂದಿಕೊಳ್ಳುವ ಹಕ್ಕಿಯಾದ ಕಾಮನ್ ಮೈನಾವು ತೆರೆದ ಮತ್ತು ಒಣ ಕಾಡುಪ್ರದೇಶಗಳು ಅಥವಾ ಕೃಷಿ ಭೂಮಿಗಳಿಂದ ಹಿಡಿದು ಮಾನವ ವಸಾಹತುಗಳ ನಗರ ಪ್ರದೇಶಗಳವರೆಗೆ ವ್ಯಾಪಕವಾದ ಆವಾಸಸ್ಥಾನದ ಆಯ್ಕೆಗಳನ್ನು ಹೊಂದಿದೆ.
ಈ ಪಕ್ಷಿಗಳು ಸರ್ವಭಕ್ಷಕವಾಗಿದ್ದು, ಬೀಜಗಳು, ಧಾನ್ಯಗಳು, ಜೀರುಂಡೆಗಳು ಮತ್ತು ಪತಂಗಗಳಂತಹ ಕೀಟಗಳು ಮತ್ತು ಅವುಗಳ ಲಾರ್ವಾಗಳನ್ನು ಹುಡುಕುತ್ತಾ, ತಿನ್ನುತ್ತಾ ತಿರುಗಾಡುತ್ತಿರುತ್ತವೆ. ವಾಸ್ತವವಾಗಿ, ಈ ಪಕ್ಷಿಗಳಿಗೆ ಮಿಡತೆಗಳ ಕಡೆಯಿರುವ ಒಲವಿನ ಕಾರಣದಿಂದಲೇ ಅಕ್ರಿಡೋಥೆರೆಸ್ (ಲ್ಯಾಟಿನ್‌ನಲ್ಲಿ ಮಿಡತೆ ಬೇಟೆಗಾರ) ಕುಲದ ಪಕ್ಷಿಗಳು ಎಂಬ ಹೆಸರನ್ನು ಪಡೆದಿವೆ. ಅವರು ಆಹಾರಕ್ಕಾಗಿ ಹುಡುಕುವಾಗ ತಮ್ಮ ಬೇಟೆಯಗಾರಿಕೆಯಲ್ಲಿ ಧೈರ್ಯಶಾಲಿಗಳು, ಆಗಾಗ್ಗೆ ಇವುಗಳು ಮೇಯುತ್ತಿರುವ ದನಗಳನ್ನು ಮತ್ತು ನೇಗಿಲುಗಳನ್ನು ಬೆನ್ನು ಹತ್ತಿ ಹೋಗುತ್ತಾರೆ, ಏಕೆಂದರೆ ಅಲ್ಲಿ ಅವರಿಗೆ ಆಗ ತಾನೇ ನೆಲದ ಅಡಿಯಿಂದ ಹೊರ ಬಂದ ರುಚಿಕರ ಕೀಟಗಳು ಸಿಗುತ್ತವೆಯಲ್ಲವೇ!
ಸಾಮಾನ್ಯವಾಗಿ ಮೈನಾಗಳು ಜೀವನಪೂರ್ತಿ ಸಂಗಾತಿಗಳಾಗಿ ಇರುತ್ತವೆ ಎಂದು ಹೇಳಲಾಗುತ್ತದೆ ಮತ್ತು ಹೆಣ್ಣನ್ನು ಮೆಚ್ಚಿಸಲು ತಲೆ ಬಾಗಿಸಿ, ನಯವಾದ ಉಬ್ಬಿದ ಪುಕ್ಕಗಳೊಂದಿಗೆ ನೃತ್ಯದಲ್ಲಿ ಪಾಲುದಾರರಾಗಿ ಒಬ್ಬರನ್ನೊಬ್ಬರು ಒಲಿಸಿಕೊಳ್ಳುತ್ತಾರೆ. ಇವು ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುತ್ತವೆ ಹಾಗೂ ಹೇರಳವಾಗಿ ಆಹಾರ ಸಿಗುವ ಜಾಗಗಳಲ್ಲಿ ಒಟ್ಟಿಗೆ ಆಹಾರ ಹುಡುಕುವುದನ್ನು ಕಾಣಬಹುದು. ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ಸಹ ಹೀಗೆ ಒಗ್ಗಟ್ಟಿನಲ್ಲಿ ಇರುವುದು ಅವರಿಗೆ ಸಹಾಯ ಮಾಡುತ್ತದೆ. ಇಷ್ಟು ಹೇಳಿದ ಮೇಲೆ ಇನ್ನೂ ಹೇಳುವುದಾದರೆ, ಅವರು ತಮ್ಮ ಗೂಡುಕಟ್ಟುವ ಪ್ರದೇಶಗಳ ಬಗ್ಗೆ ಅತ್ಯಂತ ಪ್ರಾದೇಶಿಕವಾಗಿವೆ ಜೊತೆಗೆ ತಮ್ಮ ಗೂಡುಕಟ್ಟುವ ಪ್ರದೇಶಗಳಿಂದ ಇತರ ಜೋಡಿಗಳನ್ನು ಓಡಿಸಲು ಹೋರಾಟವನ್ನು ಕೂಡ ಮಾಡುತ್ತವೆ.
ದೇಶದಾದ್ಯಂತ ಸಾಮಾನ್ಯವಾಗಿ ಕಂಡುಬರುವ ಮತ್ತು ಕೇಳಿಬರುವ ಈ ಪಕ್ಷಿಗಳು ಬೆಂಗಳೂರಿನಲ್ಲಿ ಹೇರಳವಾಗಿ ಹಾರುಡುತ್ತಿರುವ ಹಾಗೂ ಸುಲಭವಾಗಿ ಕಾಣುವ ಜಾತಿಗಳಲ್ಲಿ ಒಂದಾಗಿದೆ.
ಕೆಂಪು ಮೀಸೆಯ ಪಿಕಳಾರ (ಪೈಕ್ನೌನೋಟಸ್ ಜೋಕೋಸಸ್)
ಕೆಂಪು ಮೀಸೆಯ ಪಿಕಳಾರ ಸತ್ಚಾರಿ ರಾಷ್ಟೀಯ ಉದ್ಯಾನವನ ಬಾಂಗ್ಲಾದೇಶದಲ್ಲಿ (Image courtesy: Nafis Ameen/Creative Commons License/Wikimedia Commons)
ಬೆಂಗಳೂರಿನ ಮರಗಳ ಮೇಲಿನಿಂದ ನಿಮ್ಮ ಕಣ್ಣಿಗೆ ಕಾಣ ಸಿಗುವ ಮೊದಲೇ ಉತ್ಸಾಹಭರಿತ ಮತ್ತು ಜೋರಾದ ಹಾಡು ಕೇಳುತ್ತದೆ. ಪೆಟ್ಟಿಗ್ರೂ ಎಂದು ಕರೆಯಲ್ಪಡುವ ಈ ಹಾಡುಗಳು ಮೂರು-ನಾಲ್ಕು ಧ್ವನಿಯ ನುಡಿತದ ಸೀಟಿಯು ಕೆಂಪು ಮೀಸೆಯ ಪಿಕಳಾರಕ್ಕೆ (ಬುಲ್‌ಬುಲ್) ಸೇರಿದೆ, ಇದು ದಕ್ಷಿಣ ಏಷ್ಯಾಕ್ಕೆ ಸ್ಥಳೀಯವಾಗಿದೆ, ದಕ್ಷಿಣ ಏಷ್ಯಾ ಅಂದರೆ ಭಾರತದಿಂದ ಚೀನಾ ಮತ್ತು ಥೈಲ್ಯಾಂಡ್‌ವರೆಗೆ ಹರಡಿದೆ ಈ ಹಕ್ಕಿ. ತೆರೆದ ಕುರುಚಲು ಪೊದೆಗಳು ಮತ್ತು ಲಘುವಾದ ಕಾಡಿನ ಪ್ರದೇಶಗಳಿಂದ ಹಿಡಿದು ನಗರ ಉದ್ಯಾನವನಗಳು, ಉದ್ಯಾನಗಳು ಮತ್ತು ತೋಟಗಳು ಹಾಗೂ ಮಾನವ ವಸಾಹತುಗಳಲ್ಲಿ ಕೂಡ ಸಾಕಷ್ಟು ಆರಾಮದಾಯಕವಾಗಿ ಬದುಕಬಲ್ಲ ಹಕ್ಕಿಗಳು ಇವಾಗಿವೆ.
ಕೆಂಪು ಮೀಸೆಯ ಪಿಕಳಾರ 20 ಸೆಂ.ಮೀ ಉದ್ದದ ಮಧ್ಯಮ ಗಾತ್ರದ ಹಕ್ಕಿಯಾಗಿದೆ. ಕಂದು ಬಣ್ಣದ ಮೇಲ್ಭಾಗ, ಬಿಳಿಯ ಕೆಳಭಾಗ, ಗಾಢವಾದ ರೆಕ್ಕೆಗಳು ಮತ್ತು ಬಾಲಗಳೊಂದಿಗೆ, ಈ ಪಕ್ಷಿಯು ಮೊನಚಾದ ಕಪ್ಪು ಜುಟ್ಟು ಮತ್ತು ಕಣ್ಣುಗಳ ಹಿಂದೆ ಹೊಳಪುಳ್ಳ ಕೆಂಪು ಗರಿಗಳಿಂದ ಕೂಡಿದ್ದು ಅದು ಮೀಸೆಯನ್ನು ಹೋಲುತ್ತದೆ.
ಇವು ಇಲ್ಲಿಯ ನಿವಾಸಿ ಹಕ್ಕಿಗಳಾಗಿದ್ದು ಮುಖ್ಯವಾಗಿ ಹಣ್ಣುಗಳು, ಹಾಗೂ ಹೂವುಗಳು ತಿನ್ನುವ ಜೀವಿಗಳು, ಆದರೆ ಕೆಲವೊಮ್ಮೆ ಕೀಟಗಳು ಮತ್ತು ಜೇಡಗಳನ್ನು ಕೂಡ ತಿನ್ನುತ್ತವೆ. ಗಂಡು ಹಕ್ಕಿಗಳು ತಮ್ಮ ಸಂಗಾತಿಯನ್ನು ಮೆಚ್ಚಿಸಲು ತಲೆ ಬಗ್ಗಿಸಿ, ರೆಕ್ಕೆ ಹಾಗೂ ಬಾಲವನ್ನು ಕೆಳಗೆ ಮಾಡಿ ತಮ್ಮ ವಿಶಿಷ್ಟವಾದ ಕರ್ಕಶ ಕೂಗನ್ನು ಕೇಳಿಸುತ್ತವೆ. ಇವು ಗೂಡುಗಳನ್ನು ನಿರ್ಮಿಸುವಾಗ, ಅವು ಕಪ್ ಆಕಾರದಲ್ಲಿರುತ್ತವೆ. ಕೊಂಬೆಗಳು, ಎಲೆಗಳು ಮತ್ತು ಹುಲ್ಲಿನಿಂದ ಈ ಗೂಡುಗಳು ಮಾಡಲ್ಪಟ್ಟಿರುತ್ತವೆ, ಆದರೆ ಅವುಗಳು ತಮ್ಮದೇ ಜಾತಿಯ ಮತ್ತು ಇತರರ ಹಳೆಯ ಗೂಡುಗಳನ್ನು ಮರು-ಬಳಕೆ ಮಾಡುವುದು ಕೂಡ ಇದೆ. ಮರಿಗಳನ್ನು ಪೋಷಿಸುವಲ್ಲಿ ಪೋಷಕರು ಇಬ್ಬರೂ ಭಾಗವಹಿಸುತ್ತಾರೆ.
ಕೆಂಪು ಮೀಸೆಯ ಪಿಕಳಾರಗಳು ವಿಶೇಷವಾಗಿ ಅವುಗಳಿಗಿಂತ ಚಿಕ್ಕದಾದ ಪಕ್ಷಿಗಳ ಕಡೆಗೆ ಹೆಚ್ಚು ಆಕ್ರಮಣಕಾರಿಯಾಗಿರುತ್ತವೆ. ಆದರೆ, ಅವು ಸಮೂಹ ಜೀವಿಗಳಾಗಿ ಗುಂಪುಗಳಲ್ಲಿ ವಾಸಿಸಲು ಇಷ್ಟ ಪಡುತ್ತಾರೆ, ವಿಶೇಷವಾಗಿ ಸಂತಾನೋತ್ಪತ್ತಿಯ ಅವಧಿಯಲ್ಲಿ ಹಾಗೂ ಆಹಾರವು ಹೇರಳವಾಗಿದ್ದಾಗ ಗುಂಪಾಗಿ ಇರುವುದನ್ನು ನೋಡಬಹುದು. ಇಂದು, ಬೆಂಗಳೂರಿನಂತಹ ಹೆಚ್ಚು ನಗರೀಕರಣಗೊಂಡ ನಗರಗಳಲ್ಲಿ, ಈ ಮಟ್ಟದಲ್ಲಿ ಮಾನವ-ಪ್ರಾಬಲ್ಯದ ಪರಿಸರಕ್ಕೆ ಹೊಂದಿಕೊಂಡಿರುವ ಈ ಹಾಡುವ ಹಕ್ಕಿಗಳ ಸಾಮರ್ಥ್ಯವನ್ನು ಮೆಚ್ಚಲೇಬೇಕು.
ಹೆಜ್ಜಾರ್ಲೆ (ಪೆಲಿಕಾನಸ್ ಫಿಲಿಪ್ಪೆನ್ಸಿಸ್)
ಆಂಧ್ರಪ್ರದೇಶದ ಉಪ್ಪಳಪಾಡಿನಲ್ಲಿ ಕಂಡು ಬಂದ ಹೆಜ್ಜಾರ್ಲೆ (Image courtesy: J.M.Garg/GNU Free Documentation License/Wikimedia Commons)
ಬಹುಸಂಖ್ಯೆಯ ಸರೋವರಗಳ ನಗರವಾಗಿರುವ ಬೆಂಗಳೂರು, ವೈವಿಧ್ಯಮಯ ಜಲಪಕ್ಷಿಗಳಿಗೆ ಆತಿಥ್ಯ ವಹಿಸುವುದು ನ್ಯಾಯಯುತವೇ ಸರಿ ಬಿಡಿ. ಅಂತಹ ಒಂದು ಜಲಪಕ್ಷಿಯೆಂದರೆ ಹೆಜ್ಜಾರ್ಲೆ (ಸ್ಪಾಟ್-ಬಿಲ್ಡ್ ಪೆಲಿಕನ್) (ಪೆಲೆಕಾನಸ್ ಫಿಲಿಪೆನ್ಸಿಸ್), ಇದೊಂದು ದೊಡ್ಡ ಜಲಪಕ್ಷಿ, ಇದು ದೊಡ್ಡ ಸರೋವರಗಳು, ಜವುಗು ಪ್ರದೇಶಗಳು, ನದಿಗಳು ಮತ್ತು ಇತರ ರೀತಿಯ ಜಲಮೂಲಗಳಲ್ಲಿ ವಾಸಿಸುತ್ತದೆ. ಸುಮಾರು 127-152 ಸೆಂ.ಮೀ ಅಳತೆಯ ಗಾತ್ರದ ದೊಡ್ಡ ಹಕ್ಕಿ ಇದಾಗಿದೆ. ಹೆಜ್ಜಾರ್ಲೆ ಹಕ್ಕಿಯು ಪ್ರಧಾನವಾಗಿ ಬಿಳಿ ಬಣ್ಣವನ್ನು ಹೊಂದಿರುತ್ತದೆ, ನರೆಗೂದಲಿನ ತಲೆ, 28.5-35.5 ಸೆಂ.ಮೀ ಉದ್ದದ ಹಳದಿ-ಕಿತ್ತಳೆ ಬಣ್ಣದ ಕೊಕ್ಕು ಹಾಗೂ ದೊಡ್ಡ ಚುಕ್ಕೆಗಳೊಂದಿಗೆ ಕೊಕ್ಕಿನ ಅಡಿಯಲ್ಲಿ ಒಂದು ಗುಲಾಬಿ ಬಣ್ಣದ ಚೀಲ ಈ ಹಕ್ಕಿಯ ಗುರುತುಗಳಾಗಿವೆ.
ಜಾಗತಿಕ IUCN 2022 ರೆಡ್-ಲಿಸ್ಟ್‌ನಿಂದ 'ಅಳಿವಿನಂಚಿನ' ಸ್ಥಾನಮಾನವನ್ನು ನೀಡಲಾಗಿದೆ. ಈ ಮೊದಲು ಹೆಜ್ಜಾರ್ಲೆ ಪಕ್ಷಿಯು ದಕ್ಷಿಣ ಏಷ್ಯಾದಲ್ಲಿ (ಮುಖ್ಯವಾಗಿ ಭಾರತ, ಶ್ರೀಲಂಕಾ ಮತ್ತು ಕಾಂಬೋಡಿಯಾದಲ್ಲಿ) ವ್ಯಾಪಕವಾಗಿ ಕಂಡುಬರುತ್ತಿತ್ತು, ಆದರೆ ಈಗ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪ್ರದೇಶಗಳಲ್ಲಿ ಸಂತಾನೋತ್ಪತ್ತಿ ಅವಧಿಯು ಸಾಮಾನ್ಯವಾಗಿ ಅಕ್ಟೋಬರ್ ಮತ್ತು ಮಾರ್ಚ್ ನಡುವೆ ಇರುತ್ತದೆ. ಈ ನೀರು ಹಕ್ಕಿಗಳು ಸಾಮಾನ್ಯವಾಗಿ ಕೊಕ್ಕರೆಗಳು ಮತ್ತು ಬೆಳ್ಳಕ್ಕಿಗಳಂತಹ ಇತರ ನೀರಿನ ಪಕ್ಷಿಗಳೊಂದಿಗೆ ಮಿಶ್ರ ಗುಂಪುಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಗಂಡು ಹೆಜ್ಜಾರ್ಲೆ ಹಕ್ಕಿಯು ತನ್ನ ಕೊಕ್ಕಿನ ಚೀಲವನ್ನು ಎಲ್ಲಾ ದಿಕ್ಕುಗಳಲ್ಲಿಯೂ ತೂಗಾಡುವ, ತೇಲಾಡುವ ಚಲನೆಗಳಲ್ಲಿ ಚಲಿಸುವ ಮತ್ತು ಕೊಕ್ಕನ್ನು ಅನ್ನು ಬಾಲದ ಕಡೆಗೆ ತನ್ನ ಬೆನ್ನಿನ ಮೇಲೆ ಎಸೆಯುತ್ತದೆ, ಜೊತೆಗೆ ಆಗಾಗ್ಗೆ ಕೊಕ್ಕಿನಿಂದ ಚಪ್ಪಾಳೆಯನ್ನು ತಟ್ಟುವ ಮೂಲಕ ತನ್ನ ಪ್ರಣಯದ ಪ್ರದರ್ಶನವನ್ನು ತೋರಿಸುತ್ತದೆ. ಬಹುಮಟ್ಟಿಗೆ ಶಾಂತತೆಯಿಂದ ಇರುವ ಈ ಹಕ್ಕಿಗಳು, ಸಂತಾನೋತ್ಪತ್ತಿಯ ಸಮಯದಲ್ಲಿ ತಮ್ಮ ಕಾಲೋನಿಯಲ್ಲಿ ಗೊಣಗುವುದು ಮತ್ತು ನರಳುವ ಶಬ್ದಗಳನ್ನು ಮಾಡುತ್ತವೆ ಜೊತೆಗೆ ಮರಿಗಳಿಂದ ಬುಸುಗುಟ್ಟುವ ಮತ್ತು ಕಿರುಚುವ ಶಬ್ದಗಳನ್ನು ಕೇಳಬಹುದು.
ಇವುಗಳ ಮುಖ್ಯ ಆಹಾರವಾದ ಮೀನುಗಳನ್ನು ತಮ್ಮ ಕೊಕ್ಕಿನ ಚೀಲದ ಮೂಲಕ ಹಿಡಿಯುತ್ತವೆ. ಅವು ಸಾಮಾನ್ಯವಾಗಿ ಒಂಟಿಯಾಗಿ ಅಥವಾ ಸಣ್ಣ ಗುಂಪುಗಳಲ್ಲಿ ತಿನ್ನುತ್ತವೆ. ಈ ನೀರುಹಕ್ಕಿಗಳು ಆಕ್ರಮಣಕಾರಿಯಾಗಿ ಇರುವುದು ಬಹಳ ವಿರಳ ಹಾಗೆಯೇ ಅವು ಸ್ಥಳೀಯವಾಗಿ ಅಲ್ಪ ಸಲ್ಪ ಓಡಾಡುವುದನ್ನು ಬಿಟ್ಟರೆ, ಹೆಚ್ಚಾಗಿ ಒಂದೇ ಕಡೆ ಇರುತ್ತವೆ.
ಬಿಳಿ-ಕಂಠದ ಮಿಂಚುಳ್ಳಿ (ಹಾಲ್ಸಿಯಾನ್ ಸ್ಮಿರ್ನೆನ್ಸಿಸ್ )
ಶ್ರೀಲಂಕಾದ ಗಲ್ಲೆ ಹತ್ತಿರದ ಮಾರಂಬ ಕೆರೆಯಲ್ಲಿ ಕಂಡು ಬಂದ ಬಿಳಿ-ಕಂಠದ ಮಿಂಚುಳ್ಳಿ (Image courtesy: Charles J. Sharp / Creative Commons License /Wikimedia Commons)
ಶಾಂತ ರೀತಿಯಿಂದ ಇರುವ ಹೆಜ್ಜಾರ್ಲೆಗಳಿಗೆ ವ್ಯತಿರಿಕ್ತವಾಗಿ, ಜೋರಾಗಿ ಕಿರುಚುವ ಕರೆಯೊಂದಿಗೆ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ಜಲಪಕ್ಷಿ -ಬಿಳಿ-ಕಂಠದ ಮಿಂಚುಳ್ಳಿ. ಈ ಪ್ರಭೇದವು ಕೊಳಗಳು, ಕಾಲುವೆಗಳು ಮತ್ತು ತೊರೆಗಳಂತಹ ಜಲಮೂಲಗಳಿಂದ ಹಿಡಿದು, ಮ್ಯಾಂಗ್ರೋವ್, ಬೀಚ್‌ಗಳಲ್ಲಿರುವ ತೆಂಗಿನ ಮರಗಳಂತಹ ಹೇರಳವಾಗಿ ನೀರಿರುವ ಜಾಗಗಳಷ್ಟೇ ಅಲ್ಲದೇ ಒಣ ಪ್ರದೇಶಗಳಾದ ಬಿದಿರಿನ ಕಾಡುಗಳು, ರಸ್ತೆ ಪಕ್ಕದ ಮರಗಳು, ಲಘು ಒಣ ಕಾಡುಗಳಂತಹ ವ್ಯಾಪಕವಾದ ಆವಾಸಸ್ಥಾನಗಳನ್ನು ಆಕ್ರಮಿಸಿಕೊಂಡಿದೆ.
ಇದು ಮಧ್ಯಮ ಗಾತ್ರದ ಮಿಂಚುಳ್ಳಿಯಾಗಿದ್ದು, ಸುಮಾರು 26.5-29.6 ಸೆಂ.ಮೀ ಉದ್ದವಿರುತ್ತವೆ. ಈ ಹಕ್ಕಿಗಳು ನಸುಗೆಂಪಾದ ತಲೆ, ಕೆಳ ಹೊಟ್ಟೆ ಮತ್ತು ಪಾರ್ಶ್ವವನ್ನು ಹೊಂದಿರುತ್ತವೆ, ಅದರ ಜೊತೆಗೆ ವಿಶಿಷ್ಟವಾದ ಪ್ರಕಾಶಮಾನವಾದ ನೀಲಿ ಬೆನ್ನು, ರೆಕ್ಕೆಗಳು ಮತ್ತು ಬಾಲ ಹಾಗೂ ಬಿಳಿ ಕುತ್ತಿಗೆ ಮತ್ತು ಎದೆಯನ್ನು ಹೊಂದಿರುತ್ತವೆ.
ಇವುಗಳ ಆಹಾರದ ಆದ್ಯತೆಗಳು ಅವರ ಆವಾಸಸ್ಥಾನದ ಆದ್ಯತೆಗಳಂತೆ ವೈವಿಧ್ಯಮಯವಾಗಿವೆ. ಅವುಗಳ ವ್ಯಾಪಕವಾದ ಬೇಟೆಯಲ್ಲಿ ಮೀನುಗಳು, ಮಿಡತೆಗಳಂತಹ ಕೀಟಗಳು, ಜೀರುಂಡೆಗಳು, ಜಿರಳೆಗಳು, ರೆಕ್ಕೆಯ ಇರುವೆಗಳು, ಸಣ್ಣ ಚೇಳುಗಳು, ಶತಪದಿಗಳು ಮತ್ತು ಹಲ್ಲಿಗಳು ಹಾಗೂ ಊಸರವಳ್ಳಿಗಳಂತಹ ಸರೀಸೃಪಗಳೆಲ್ಲವೂ ಸೇರಿವೆ.
ಬಿಳಿ-ಕಂಠದ ಮಿಂಚುಳ್ಳಿಗಳು ತಮ್ಮ ಭೌಗೋಳಿಕ ಸ್ಥಳದ ಆಧಾರದ ಮೇಲೆ ವಿವಿಧ ಸಂತಾನವೃದ್ಧಿ ಋತುಗಳನ್ನು ಹೊಂದಿವೆ. ಭಾರತದಲ್ಲಿ, ಈ ಪಕ್ಷಿಗಳು ಮಳೆಗಾಲದ ಆರಂಭದಲ್ಲಿ ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸುತ್ತವೆ, ಈ ಸಮಯದಲ್ಲಿ ಈ ಪಕ್ಷಿಗಳು ಎತ್ತರದ ಜಾಗಗಳಲ್ಲಿ ಕುಳಿತು ತಮ್ಮ ರೆಕ್ಕೆಗಳನ್ನು ತೆರೆಯುತ್ತ ಬಿಳಿಯ ತೇಪೆಗಳನ್ನು ತೋರಿಸುತ್ತಾ ಕರೆ ಮಾಡಲು ಪ್ರಾರಂಭಿಸುತ್ತವೆ. ಹೆಣ್ಣು ಹಕ್ಕಿಗಳು ಪುನರಾವರ್ತಿತ ಕರೆಗಳೊಂದಿಗೆ ಹಾಗೂ ತನ್ನ ರೆಕ್ಕೆಗಳನ್ನು ಭಾಗಶಃ ತೆರೆಯುವ ಮೂಲಕ ಪ್ರತಿಕ್ರಿಯಿಸುತ್ತದೆ ಎಂದು ಹೇಳಲಾಗುತ್ತದೆ.
ಈ ಪಕ್ಷಿ ಪ್ರಭೇದದ ಕೆಲವು ಹಕ್ಕಿಗಳು ಕಡಿಮೆ ದೂರದಲ್ಲಿ ವಲಸೆ ಹೋಗುತ್ತವೆ ಮತ್ತು ಈ ಹಕ್ಕಿಗಳು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ.
ಗುಲಾಬಿ-ಕೊರಳಿನ ಗಿಳಿ (ಸಿಟ್ಟಾಕುಲಾ ಕ್ರಮೇರಿ)
ದಕ್ಷಿಣ ಆಫ್ರಿಕಾದ ಎಡನ್ ಎವಿಯರಿ ಹಕ್ಕಿಗಳಲ್ಲಿ ಕಂಡು ಬಂದ ಗುಲಾಬಿ-ಕೊರಳಿನ ಗಿಳಿ (Image courtesy: Dick Daniels /Creative Commons License/Wikimedia Commons)
ಶತಮಾನಗಳಿಂದ ಮನುಷ್ಯನ ಜೀವನದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಪಕ್ಷಿ ಎಂದರೆ ಗಿಳಿ. ಈ ಪಕ್ಷಿಗಳು ಮಾನವನ ಮಾತನ್ನು ಸುಸಂಬದ್ಧ ರೀತಿಯಲ್ಲಿ ಅನುಕರಿಸುವ ಸಾಮರ್ಥ್ಯದಿಂದ ಮನುಷ್ಯರನ್ನು ಆಕರ್ಷಿಸಿವೆ. ಪ್ರಾಚೀನ ಗ್ರೀಕ್ ನಾಗರಿಕತೆಯಿಂದಲೂ ಗಿಳಿಗಳು ಸಾಕುಪ್ರಾಣಿಗಳಾಗಿ ಜನಪ್ರಿಯವಾಗಿವೆ. ಮಧ್ಯಮ ಗಾತ್ರದ ಹಕ್ಕಿಯಾದ ಈ ಗುಲಾಬಿ-ಕೊರಳಿನ ಗಿಳಿ, ಸಾಮಾನ್ಯವಾಗಿ ಆಫ್ರಿಕಾ ಮತ್ತು ಭಾರತೀಯ ಉಪಖಂಡದಲ್ಲಿ ಕಂಡುಬರುತ್ತದೆ. ಇವು ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಲೇ ಇರುವ ಮಾನವರ ವಸಾಹತುಗಳಿಗೆ ಮತ್ತು ನಗರೀಕರಣಕ್ಕೆ ಉತ್ತಮವಾಗಿ ಹೊಂದಿಕೊಂಡಿವೆ ಎಂದು ಅದರ ವಿಶಾಲವಾದ ಆವಾಸಸ್ಥಾನದಿಂದ ಕಂಡುಬರುತ್ತದೆ - ಸಣ್ಣ ಹುಲ್ಲು ಮತ್ತು ತೆರೆದ ಪೊದೆಸಸ್ಯವನ್ನು ಹೊಂದಿರುವ ನೈಸರ್ಗಿಕ ಹುಳ್ಳುಗಾವಲುಗಳು, ಸವನ್ನಾ ಕಾಡುಗಳಂತಹ ತೆರೆದ ಪ್ರದೇಶಗಳು ಅದರ ಜೊತೆಗೆ ಕೃಷಿ ಭೂಮಿಗಳು, ತೋಟಗಳು, ಉದ್ಯಾನಗಳು, ಕಿಕ್ಕಿರಿದ ಮಾನವ ವಸಾಹತುಗಳಂತಹ ಮಾನವ ಪ್ರಾಬಲ್ಯದ ಸ್ಥಳಗಳೆಲ್ಲವೂ ಕೂಡ ಹೌದು.
ಗುಲಾಬಿ-ಕುತ್ತಿಗೆಯ ಗಿಳಿಯು ಉದ್ದವಾದ ಬಾಲ ಮತ್ತು ಗಾಢ ಕೆಂಪಾದ ಕೊಕ್ಕನ್ನು ಹೊಂದಿದ್ದು, ಮೇಲ್ಭಾಗದ ಕೊಕ್ಕಿನ ತುದಿ ಕಪ್ಪಾಗಿದೆ, ಜೊತೆಗೆ ವಿಶಿಷ್ಟವಾದ ತೆಳು ಹಸಿರು ದೇಹವನ್ನು ಹೊಂದಿದೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ಒಂದು ಅಂಶದಲ್ಲಿ ನೋಡಲು ಭಿನ್ನವಾಗಿರುತ್ತವೆ - ಗಂಡು ಹಕ್ಕಿಗಳ ಕುತ್ತಿಗೆಯ ಸುತ್ತಲೂ ಗುಲಾಬಿ ಉಂಗುರವನ್ನು ಹೊಂದಿರುತ್ತದೆ, ಇದೇ ಕಾರಣದಿಂದ ಈ ಜಾತಿಗೆ ಅದರ ಹೆಸರು ಬಂದಿದೆ. ಇವುಗಳ ವಯಸ್ಕ ಹೆಣ್ಣು ಹಕ್ಕಿಗಳು ಪಚ್ಚೆ ಅಥವಾ ಬೂದು ಉಂಗುರವನ್ನು ತಮ್ಮ ಕುತ್ತಿಗೆಯ ಸುತ್ತಲೂ ಹೊಂದಿರುತ್ತವೆ.
ಅವುಗಳ ಆಹಾರವು ಪೇರಲ, ಖರ್ಜೂರ, ಮಾವಿನ ಹಣ್ಣುಗಳು, ಹಾಗೂ ರಾಗಿ, ಜೋಳ ಮತ್ತು ಹಣ್ಣುಗಳ ಬೀಜಗಳನ್ನು ಒಳಗೊಂಡಿರುತ್ತದೆ. ಇದೇ ಕಾರಣದಿಂದ, ಈ ಹಕ್ಕಿಗಳನ್ನು ಧಾನ್ಯಗಳು ಮತ್ತು ಹಣ್ಣುಗಳನ್ನು ತಿನ್ನುವ ಅತ್ಯಂತ ಕುಖ್ಯಾತ ಪಕ್ಷಿ 'ಪೀಡಕಾರಿ' ಎಂದು ಹೆಸರಿಸಲಾಗಿದೆ.
ಈ ಪಕ್ಷಿಗಳು ಎತ್ತರದ ಸ್ವರದಲ್ಲಿ ಕೂಗುತ್ತಲೇ ಇರುವುದನ್ನು ಕೇಳಬಹುದು, ಅವುಗಳ ಗುಂಪುಗಳಲ್ಲಿ ಯಾವಾಗಲೂ ಸಾಕಷ್ಟು ಗದ್ದಲವೇ ಇರುತ್ತದೆ . ಅವು ಸಾಮಾನ್ಯವಾಗಿ ಏಷ್ಯಾದಲ್ಲಿ ಜನವರಿಯಿಂದ ಏಪ್ರಿಲ್ ವರೆಗೆ ಸಂತಾನೋತ್ಪತ್ತಿ ಮಾಡುತ್ತವೆ ಜೊತೆಗೆ ಕೆಲವೊಂದು ಬಾರಿ ಸಡಿಲವಾದ ರಚನೆಯ ವಸಾಹತುಗಳಲ್ಲಿ ವಾಸಿಸುತ್ತವೆ.
ಬೆಂಗಳೂರಿನಲ್ಲಿ, ಒರಾಯನ್ ಮಾಲ್ ಮತ್ತು ಬನಶಂಕರಿ ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಗಿಳಿಗಳ ದೊಡ್ಡ ಹಿಂಡುಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಬಿಳಿ- ಕೆನ್ನೆಯ ಕುಟ್ರುಪಕ್ಷಿ (ಸೈಲೋಪೋಗಾನ್ ವಿರಿಡಿಸ್ )
ಬಿಳಿ- ಕೆನ್ನೆಯ ಕುಟ್ರುಪಕ್ಷಿ (Image courtesy: Vengolis /Creative Commons License/Wikimedia Commons)
ಬೆಂಗಳೂರಿನಂತಹ ಜನನಿಬಿಡ ನಗರಗಳಲ್ಲಿಯೂ ಬಿಳಿ ಕೆನ್ನೆಯ ಬಾರ್ಬೆಟ್‌ನ (ಕುಟ್ರುಪಕ್ಷಿ) ಜೋರಾದ ಟುಕ್-ಟುಕ್ ಶಬ್ದ ಕೇಳಿಸುತ್ತದೆ. ಈ ಪಕ್ಷಿ ಪ್ರಭೇದವು ಪಶ್ಚಿಮ ಘಟ್ಟಗಳ ಸಾಮಾನ್ಯ ಪಕ್ಷಿಗಳಲ್ಲಿ ಒಂದಾಗಿದೆ. 16.5-18.5 ಸೆಂ.ಮೀ ಉದ್ದದ ಈ ಪಕ್ಷಿಯು ಹೆಚ್ಚಾಗಿ ಹಸಿರು ಬಣ್ಣವನ್ನು ಹೊಂದಿರುತ್ತದೆ, ಕಡು ಕಂದು ಬಣ್ಣದ ತಲೆ, ಕೆನ್ನೆಗಳ ಮೇಲೆ ವಿಶಿಷ್ಟವಾದ ಬಿಳಿ ತೇಪೆ ಮತ್ತು ಕಂದು ಬಣ್ಣದ ಕಳೆಯ ಗುಲಾಬಿ ಕೊಕ್ಕನ್ನು ಹೊಂದಿರುತ್ತದೆ.
ಬಿಳಿ-ಕೆನ್ನೆಯ ಕುಟ್ರುಪಕ್ಷಿ ಭಾರತೀಯ ಪರ್ಯಾಯ ದ್ವೀಪದ ನಿತ್ಯಹರಿದ್ವರ್ಣ ಮತ್ತು ತೇವಾಂಶವುಳ್ಳ ಎಲೆಯುದುರುವ ಕಾಡುಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಪಶ್ಚಿಮ ಘಟ್ಟಗಳು, ಕಾಡುಗಳಲ್ಲಿ ಹಾಗೂ ಮಾನವ ಪ್ರಾಬಲ್ಯವಿರುವ ಪ್ರದೇಶಗಳ ಹತ್ತಿರದಲ್ಲಿನ ತೋಟಗಳು ಮತ್ತು ಉದ್ಯಾನವನಗಳಂತಹ ಪ್ರದೇಶಗಳಲ್ಲಿ ವಾಸಿಸುತ್ತದೆ. ಇದು ಬೆಂಗಳೂರಿನಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಬಾರ್ಬೆಟ್ ಕೂಡ ಆಗಿದೆ.
ಇವು ವಲಸೆ ಹೋಗುವುದಿಲ್ಲ ಮತ್ತು ಆಹಾರವನ್ನು ಹುಡುಕಿಕೊಂಡು ಸ್ವಲ್ಪ ದೂರದವರೆಗೆ ಮಾತ್ರ ಪ್ರಯಾಣಿಸುತ್ತವೆ. ಇವು ಮೂಲವಾಗಿ ತಮ್ಮ ಆವಾಸಸ್ಥಾನವಾದ ಮರದಲ್ಲಿನ ಹಣ್ಣುಗಳು ಮತ್ತು ಹೂವುಗಳನ್ನು ತಿನ್ನುತ್ತವೆ, ಆದರೆ ಗೆದ್ದಲುಗಳು ಮತ್ತು ಚಿಟ್ಟೆಗಳಂತಹ ಕೀಟಗಳನ್ನು ಸಹ ಕೆಲವು ಬಾರಿ ತಿನ್ನುತ್ತವೆ. ಪ್ರಸಿದ್ಧ ಫಲಹಾರಿಯಾದ ಇವು ತಮ್ಮ ಹೆಚ್ಚಿನ ನೀರಿನ ಅವಶ್ಯಕತೆಗಳನ್ನು ಅಂಜೂರದಂತಹ ಹಣ್ಣುಗಳ ಮೂಲಕವೇ ಪೂರೈಸಿಕೊಳ್ಳುತ್ತವೆ. ಕೆಲವೇ ಕೆಲವು ಸಂದರ್ಭಗಳಲ್ಲಿ ಆಹಾರವನ್ನು ಹುಡುಕುವುದನ್ನು ಹೊರತುಪಡಿಸಿ, ಇವು ಮರದ ಆಶ್ರಯವನ್ನು ಬಿಟ್ಟು ಹೋಗುವುದು ಬಹಳ ಅಪರೂಪ.
ಅವು ಹೆಚ್ಚು ಆಕ್ರಮಣಕಾರಿ ಮತ್ತು ಪ್ರಾದೇಶಿಕ ಪಕ್ಷಿಗಳು, ವಿಶೇಷವಾಗಿ ಇತರೆ ಜಾತಿಗಳ ಪಕ್ಷಿಗಳ ವಿರುದ್ಧ. ಇವು ಮೂರು ಪಟ್ಟಿಯ ಅಳಿಲುಗಳನ್ನು ಓಡಿಸುವುದನ್ನು ಸಹ ಗಮನಿಸಲಾಗಿದೆ. ಇವುಗಳಲ್ಲಿ ಜೋಡಿ ಹಕ್ಕಿಗಳು ಒಂದಕ್ಕೊಂದು ಹತ್ತಿರದಲ್ಲಿ ಗೂಡುಕಟ್ಟಬಹುದು, ಆದರೆ ಈ ಜಾತಿಯ ಜೋಡಿಗಳು ಒಂದೇ ಮರದಲ್ಲಿ ಗೂಡುಕಟ್ಟುವುದಿಲ್ಲ. ಪ್ರಣಯದ ಪ್ರಕ್ರಿಯೆಯು ಪ್ರಣಯದ ಅವಧಿಯಲ್ಲಿ ಸಂಗಾತಿಗೆ ಆಹಾರ ನೀಡುವುದು ಮತ್ತು ಗೂಡು ಕಟ್ಟುವುದನ್ನು ಒಳಗೊಂಡಿರುತ್ತದೆ. ಇವುಗಳು ಮರವನ್ನು ಕುಕ್ಕಿ ಕೊರೆದು ಚೂರುಗಳನ್ನು ಹೊರಗೆಸೆಯುವುದರ ಮೂಲಕ ನಿರ್ಮಿಸುವ ಮರದ ತೂತುಗಳಲ್ಲಿ ಗೂಡು ಕಟ್ಟುತ್ತವೆ.
ಈ ಪಕ್ಷಿಗಳು ಮಾನವ ವಸಾಹತುಗಳಿಗೆ ಮತ್ತು ಅವುಗಳ ಪರಿಸರಕ್ಕೆ ಮಾರ್ಪಾಡುಗಳಿಗೆ ಉತ್ತಮವಾಗಿ ಹೊಂದಿಕೊಂಡು ಹೇರಳವಾಗಿ ಕಂಡುಬರುವ ಹಕ್ಕಿಗಳಲ್ಲಿ ಉತ್ತಮವಾಗಿ ಅಧ್ಯಯನ ಮಾಡಲ್ಪಟ್ಟ ಜಾತಿಗಳಾಗಿವೆ.
ಶಿಕ್ರಾ (ಬಿಚ್ಚು) (ಆಕ್ಸಿಪಿಟರ್ ಬ್ಯಾಡಿಯಸ್ )
ಶಿಕ್ರಾ (Image courtesy: Ravi Vaidyanathan / GNU Free Documentation License/Wikimedia Commons)
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಬೇಟೆಗಾರ ಪಕ್ಷಿ ಶಿಕ್ರಾ. ಉಳಿದ ಬೇಟೆಗಾರ ಪಕ್ಷಿಗಳಂತೆ, ಈ ಪಕ್ಷಿಗಳು ತಮ್ಮ ಮೇಲಿನ ಕೊಕ್ಕಿನಲ್ಲಿ ಚೂಪಾದ ಮತ್ತು ಬಾಗಿದ ತ್ರಿಕೋನ-ಆಕಾರದ ಭಾಗವನ್ನು ಹೊಂದಿರುತ್ತವೆ, ಇದರಿಂದ ಕತ್ತರಿಸಲು ಸುಲಭವಾಗುತ್ತದೆ. ಈ ಪಕ್ಷಿಗಳು ಚಿಕ್ಕದಾಗಿರುತ್ತವೆ, ಆದರೆ ತುಲನಾತ್ಮಕವಾಗಿ ಉದ್ದವಾದ ಬೂದು ಬಾಲಗಳನ್ನು ಹೊಂದಿರುತ್ತವೆ. ದೇಹದ ಮೇಲ್ಭಾಗವು ಬೂದು ಬಣ್ಣದ್ದಾಗಿದ್ದರೆ ಶಿಕ್ರಾಗಳ ಕೆಳಭಾಗವು ಪಟ್ಟಿಗಳಿಂದ ಕೂಡಿದ ಬಿಳಿಯಾಗಿರುತ್ತದೆ ಮತ್ತು ಅವು ಚಿಕ್ಕ ಕಾಲುಗಳು ಮತ್ತು ಕಾಲ್ಬೆರಳುಗಳನ್ನು ಹೊಂದಿರುತ್ತವೆ. ಈ ಜಾತಿಯ ಗಂಡುಗಳು ಚಿಕ್ಕದಾಗಿರುತ್ತವೆ ಮತ್ತು ಗಾಢವಾದ ಕೆಂಪು ಕಣ್ಪೊರೆಗಳನ್ನು ಹೊಂದಿರುತ್ತವೆ, ಸ್ವಲ್ಪ ದೊಡ್ಡದಾಗಿರುವ ಹೆಣ್ಣುಗಳು ಕಡಿಮೆ ಕೆಂಪು
ಕಣ್ಪೊರೆಗಳನ್ನು ಹೊಂದಿರುತ್ತವೆ.
ಅವು ಒಣ, ಎಲೆ ಉದುರಿಸುವ ಮತ್ತು ಅಗಲ ಎಲೆಯ ಕಾಡುಪ್ರದೇಶಗಳು ಹಾಗೂ ಹುಲ್ಲುಗಾವಲುಗಳಲ್ಲಿ ಕಂಡುಬರುತ್ತವೆ. ಅವು ಕೆಲವು ಬಾರಿ ವಿದೇಶಿ ಮರದ ತೋಟಗಳೊಂದಿಗೆ ಕೂಡಿದ ಉದ್ಯಾನಗಳಲ್ಲಿ ಕೂಡ ಕಂಡುಬರುತ್ತವೆ.
ಈ ಪರಭಕ್ಷಕ ಪಕ್ಷಿಗಳು ಎತ್ತರದ ಜಾಗಗಳಿಂದ ಬೇಟೆಯಾಡುತ್ತವೆ ಮತ್ತು ನೆಲಕ್ಕೆ ಅಥವಾ ನೆಲಕ್ಕೆ ಹತ್ತಿರವಾಗಿ ಕೆಳಗಿನ ಮೇಲ್ಮೈಗೆ ಒಮ್ಮೆಲೆ ರಭಸವಾಗಿ ಅಪ್ಪಳಿಸುವ ರೀತಿಯಲ್ಲಿ ಹಾರುತ್ತವೆ. ಇವುಗಳ ಬೇಟೆಯಲ್ಲಿ ಸಣ್ಣ ಸರೀಸೃಪಗಳಾದ ಹಲ್ಲಿಗಳು ಮತ್ತು ಓತಿಕ್ಯಾತಗಳು, ಹಾಗೆಯೇ ಸಣ್ಣ ಹಕ್ಕಿಗಳು, ದಂಶಕಗಳು, ಅಳಿಲುಗಳು ಮತ್ತು ಕೆಲವು ಕೀಟಗಳು ಕೂಡ ಸೇರಿವೆ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಾರುವಾಗ ಅವು ರೆಕ್ಕೆಯನ್ನು ಬಡಿದು ತೇಲುತ್ತಾ ಹೋಗುವುದನ್ನು ಕಾಣಬಹುದು.
ಸಂತಾನವೃದ್ಧಿ ಕಾಲದಲ್ಲಿ ಶಿಕ್ರಾಗಳ ಧ್ವನಿಯನ್ನು ಅತ್ಯಂತ ಹೆಚ್ಚಾಗಿ ಕೇಳಬಹುದು, ಆದರೆ ಅವುಗಳ ಮುಖ್ಯವಾದ ಎರಡು-ಸ್ವರದ ಕರೆಗಳು ಇತರ ಸಮಯಗಳಲ್ಲಿ ಹಾರಾಟದ ಸಮಯದಲ್ಲಿ ಜೋರಾದ ಕರೆಗಳನ್ನು, ಹಾಗೂ ಸಂಯೋಗದ ಸಮಯದಲ್ಲಿ ಕರ್ಕಶವಾದ ಹಾಗೂ ದೊಡ್ಡ ಶಬ್ದಗಳನ್ನು ಒಳಗೊಂಡಿರುತ್ತದೆ. ಸುರುಳಿಗಳು ಮತ್ತು ಉರುಳುವ ವೈಮಾನಿಕ ಪ್ರದರ್ಶನಗಳು ಸಂಯೋಗದ ಪ್ರದರ್ಶನದ ಒಂದು ಭಾಗವಾಗಿದೆ. ಅವು ಸಾಮಾನ್ಯವಾಗಿ ಗೂಡುಗಳು ಮತ್ತು ಗೂಡುಕಟ್ಟುವ ಸ್ಥಳಗಳನ್ನು ಮರುಬಳಕೆ ಮಾಡುತ್ತವೆ, ಮತ್ತು ಸಂತಾನೋತ್ಪತ್ತಿ ಜೋಡಿಗಳು ಪರಸ್ಪರ ಕೆಲವು ಕಿಲೋಮೀಟರ್‌ಗಳಲ್ಲಿ ಗೂಡುಕಟ್ಟುವುದನ್ನು ಕಾಣಬಹುದು.
ಇದು ಭಾರತದ ಅತ್ಯಂತ ಸಾಮಾನ್ಯ ಗಿಡುಗಗಳಲ್ಲಿ ಒಂದಾಗಿದೆ. ವಾಸ್ತವವಾಗಿ, ಈ ಪ್ರಖ್ಯಾತ ಬೇಟೆಹಕ್ಕಿಗಳು, ಬೇಟೆಗಾರರು ತಮ್ಮ ಕಾಡು ಆವಾಸಸ್ಥಾನಗಳಲ್ಲಿ ತರಬೇತಿ ನೀಡಲು ಮತ್ತು ಬೇಟೆಯಾಡಲು ಸಾಮಾನ್ಯವಾಗಿ ಬಳಸುವ ಪಕ್ಷಿಗಳಲ್ಲಿ ಒಂದಾಗಿದೆ. ಈ ಬೇಟೆಯಾಡುವ ಹಕ್ಕಿಯು ಭಾರತೀಯ ಮತ್ತು ಸಿಂಗಾಪುರ್ ಏರ್ ಫೋರ್ಸ್‌ನಂತಹ ಮಾನವ ಸಂಘಟನೆಗಳಲ್ಲಿ ಅದರ ವೇಗ ಮತ್ತು ನಿಖರತೆಗೆ ಹೆಸರುವಾಸಿಯಾಗಿ, ಮನುಷ್ಯರ ಮಧ್ಯೆಯೂ ಕೂಡ ತನ್ನ ಛಾಪನ್ನು ಮೂಡಿಸಿದೆ.
ಕೋಗಿಲೆ (ಯುಡಿನಾಮಿಸ್ ಸ್ಕೋಲೋಪೇಸಿಯಸ್ )
ಕೇರಳದ ಚಾಲಕುಡಿಯಲ್ಲಿ ಕಂಡು ಬಂದ ಕೋಗಿಲೆ (Image courtesy: Challiyan/ GNU Free Documentation License/Wikimedia Commons)
ಗಂಡು ಕೋಗಿಲೆಯ ವಿಶಿಷ್ಟವಾದ ಜೋರಾದ ಕುಹೂ ಕೂಗುವಿಕೆಯು ನಗರದ ಉದ್ಯಾನವನಗಳು ಮತ್ತು ಮರಗಳಿರುವ ಪ್ರದೇಶಗಳಲ್ಲಿ ಕೇಳಿ ಬರುವ ಸಾಮಾನ್ಯ ಧ್ವನಿಯಾಗಿದೆ. ಈ ಜಾತಿಯ ಗಂಡು ಹಕ್ಕಿಗಳು ಹೊಳಪು ಕಪ್ಪಿನ ಬಣ್ಣವಾಗಿದ್ದರೆ ಹೆಣ್ಣು ಹಕ್ಕಿಗಳ ಮೇಲ್ಮೈ ಭಾಗ ಗಾಢ ಕಂದು ಮತ್ತು ಮಚ್ಚೆ ಅಥವಾ ಮಸುಕಾದ ನೆರಳಿನ ಗೆರೆಗಳಿಂದ ಕೂಡಿರುತ್ತವೆ. ಹೆಣ್ಣು ಹಕ್ಕಿಗಳು ಪಟ್ಟೆಯುಳ್ಳ ಬಿಳಿಯ ಕೆಳಭಾಗವನ್ನು ಕೂಡ ಹೊಂದಿರುತ್ತವೆ. ಈ ಕೋಗಿಲೆಗಳು ಉದ್ದವಾದ, ಅಗಲವಾದ ಬಾಲವನ್ನು ಹಾಗೂ ಚಿಕ್ಕದಾದ, ಬಲವಾದ ಕಾಲುಗಳನ್ನು ಹೊಂದಿವೆ.
ಕೋಗಿಲೆಗಳು ತೋಟಗಳು ಮತ್ತು ಉದ್ಯಾನವನಗಳಂತಹ ತೆರೆದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತದೆ. ಏಶಿಯನ್ ಕೋಗಿಲೆಯು, ಇತರ ಕೋಗಿಲೆ ಜಾತಿಗಳಂತೆ, ಸಂಸಾರ ಪರಾವಲಂಬಿಗಳಾಗಿದ್ದು ಕಾಗೆಗಳು ಮತ್ತು ಮೈನಾಗಳಂತಹ ಇತರ ಪಕ್ಷಿಗಳ ಗೂಡುಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮಿಲನದ ಸಮಯದಲ್ಲಿ, ಗಂಡು ಹಕ್ಕಿಯು ಹೆಣ್ಣಿಗೆ ತಗ್ಗಿದ ರೆಕ್ಕೆಗಳು ಮತ್ತು ಬಾಲದೊಂದಿಗೆ ನಮಸ್ಕರಿಸಿ ಮತ್ತು ವಿಶಿಷ್ಟವಾದ ಧ್ವನಿಗಳ ಸ್ಫೋಟಗಳನ್ನು ಉಂಟುಮಾಡುತ್ತದೆ, ಇದನ್ನು ಹೆಣ್ಣು ಹಕ್ಕಿಯು ಪರಸ್ಪರ ಬಾಗುತ್ತಾ ಪ್ರತಿಕ್ರಿಯಿಸುತ್ತದೆ. ಗಂಡು ಹಕ್ಕಿ ಕೊಡುವ ಮಾಗಿದ ತಾಳೆ ಹಣ್ಣಿನ ಜಾತಿಯ ಇತರೆ ಹಣ್ಣುಗಳನ್ನು ತಿನ್ನುವ ಮೂಲಕವೂ ಕೂಡ ಇವು ಪ್ರಣಯದ ಪದ್ಧತಿಯನ್ನು ತೋರಿಸುತ್ತವೆ. ಹೆಣ್ಣು ಕೋಗಿಲೆಗಳು ಕಾಗೆಗಳ ಗೂಡಿನಲ್ಲಿ ಮೊಟ್ಟೆ ಇಡುವ ಸಮಯದಲ್ಲಿ ಗಂಡು ಕೋಗಿಲೆಗಳು ಕಾಗೆಗಳು ಅಥವಾ ಇತರ ಪಕ್ಷಿಗಳ ಗಮನವನ್ನು ಬೇರೆ ಕಡೆಗೆ ಹರಿಸುವುದು ಕಂಡು ಬರುತ್ತದೆ. ಕುತೂಹಲಕಾರಿಯಾಗಿ, ಈ ಪಕ್ಷಿಗಳು ಕಾಗೆಯ ಕಠೋರವಾದ ಕಾವ್ ಕಾವ್ ತರಹದ ಆತಿಥೇಯ ಹಕ್ಕಿಗೆ ಹೋಲುವ ಕರೆಗಳನ್ನು ಕೂಗುವ ಮೂಲಕ ಅವುಗಳನ್ನು ವಂಚಿಸುವ ಕಲೆಯನ್ನು ಕರಗತ ಮಾಡಿಕೊಂಡಿವೆ. ಅವುಗಳ ಮೊಟ್ಟೆಗಳು ಸಹ ನೋಡಲು ಅತಿಥೇಯ ಹಕ್ಕಿಗಳ ಮೊಟ್ಟೆಗಳಂತೆಯೇ ಕಾಣುತ್ತವೆ. ಮರಿಗಳು ಮತ್ತು ಆತಿಥೇಯ ಹೆತ್ತವರು ಅದೇ ಗೂಡಿನಲ್ಲಿ ಒಟ್ಟಿಗೆ ಬೆಳೆಯುತ್ತ ಇರುತ್ತವೆ, ಆ ಸಮಯದಲ್ಲಿ ಸುಮಾರು ಬಾರಿ ಮೊದಲು ಮೊಟ್ಟೆಯೊಡೆದು ಹೊರ ಬರುವ ಕೋಗಿಲೆ ಮರಿಗಳು ಇತರ ಮೊಟ್ಟೆಗಳನ್ನು ಗೂಡಿನಿಂದ ಹೊರಗೆ ತಳ್ಳುತ್ತವೆ.
ಇವು ಗದ್ದಲದ ಪಕ್ಷಿಗಳು, ಜೊತೆಗೆ ಗಂಡು ಹಕ್ಕಿಗಳು ಸಾಮಾನ್ಯವಾಗಿ ಪ್ರಾದೇಶಿಕವಾಗಿರುತ್ತವೆ ಮತ್ತು ಸಂತಾನೋತ್ಪತ್ತಿ ಅವಧಿಯಲ್ಲಿ ತಮ್ಮದೇ ಆದ ಗೊತ್ತುಪಡಿಸಿದ ಸ್ಥಳಗಳನ್ನು ಹೊಂದಿದ್ದು ಆ ಜಾಗ ಬೇರೆ ಗಂಡು ಕೋಗಿಲೆಯ ಜಾಗದೊಂದಿಗೆ ಅತಿಕ್ರಮಿಸುವುದಿಲ್ಲ. ಅವು ಸಾಮಾನ್ಯವಾಗಿ ಒಂಟಿಯಾಗಿರುವ ಪಕ್ಷಿಗಳು, ಆದರೆ ಸಾಮಾನ್ಯವಾಗಿ ಮಾಗಿದ ಹಣ್ಣುಗಳು ಮರಗಳಲ್ಲಿ ಬಂದಿರುವಾಗ ಗುಂಪುಗಳಲ್ಲಿ ಬಂದು ಆಹಾರವನ್ನು ಭಕ್ಷಿಸುತ್ತವೆ. ಅನೇಕ ಇತರ ಜಾತಿಯ ಕೋಗಿಲೆಗಳಿಗಿಂತ ಭಿನ್ನವಾಗಿ, ಅವುಗಳ ಆಹಾರವು ಮುಖ್ಯವಾಗಿ ಅಂಜೂರದ ಅಥವಾ ಆಲದ ಹಣ್ಣುಗಳು ಮತ್ತು ಚೆರ್ರಿಗಳಂತಹ ಹಣ್ಣುಗಳನ್ನು ಒಳಗೊಂಡಿರುತ್ತದೆ, ಆದಾಗ್ಯೂ ಕೆಲವು ಕೀಟಗಳು ಮತ್ತು ಮರಿಹುಳುಗಳು ಸಹ ಅವುಗಳ ಆಹಾರದ ಯೋಜನೆಯ ಭಾಗವಾಗಿದೆ. ಇವು ಸಾಮಾನ್ಯವಾಗಿ ಮಾಗಿದ ಹಣ್ಣುಗಳನ್ನು ನೇರವಾಗಿ ಮರದಿಂದ ಕಿತ್ತು ಹಣ್ಣುಗಳನ್ನು ಸಂಪೂರ್ಣವಾಗಿ ನುಂಗುತ್ತಾರೆ. ಹೆಣ್ಣು ಹಕ್ಕಿಗಳು ಯಾವ ಗೂಡಿನಲ್ಲಿ ಮೊಟ್ಟೆಗಳನ್ನು ಇಡುತ್ತವೆಯೋ ಆ ಹಕ್ಕಿಯ ಮೊಟ್ಟೆಗಳನ್ನು ಕೂಡ ಹೆಚ್ಚಾಗಿ ತಿನ್ನುತ್ತವೆ.
ಈ ಕುತೂಹಲಕಾರಿ ಹಕ್ಕಿ ಹೆಚ್ಚಾಗಿ ಬೆಂಗಳೂರಿನಲ್ಲಿ ಮಾಗಿದ ಹಣ್ಣು ಹಂಪಲುಗಳು ಕಂಡುಬರುವ ಸ್ಥಳಗಳಲ್ಲಿ ಕಂಡುಬರುತ್ತದೆ.
ಕಪ್ಪು ಗಾಳಿಪಟ (ಮಿಲ್ವಸ್ ಮೈಗ್ರಾನ್ಸ್ )
ಕಪ್ಪು ಗಾಳಿಪಟ (Image courtesy: Sri D /Creative Commons License/Wikimedia Commons)
ಬೆಂಗಳೂರು ಮತ್ತು ಇತರ ಅನೇಕ ಭಾರತೀಯ ನಗರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಬೇಟೆಯ ಮತ್ತೊಂದು ಪಕ್ಷಿ ಕಪ್ಪು ಗಾಳಿಪಟವಾಗಿದೆ. ಈ ಜಾತಿಯು ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾ ಸೇರಿದಂತೆ ವಿವಿಧ ಭೌಗೋಳಿಕ ಸ್ಥಳಗಳಲ್ಲಿ ಕಂಡುಬರುತ್ತದೆ ಹಾಗೂ ಅವುಗಳ ಸ್ಥಳಗಳ ಆಧಾರದ ಮೇಲೆ ಅವುಗಳ ಚಹರೆಯಲ್ಲಿ ವ್ಯತ್ಯಾಸಗಳನ್ನು ತೋರಿಸುತ್ತದೆ. ಈ ಕಾರಣದಿಂದಾಗಿ ಇವುಗಳ ಅನೇಕ ಉಪಜಾತಿಗಳಿವೆ, ಇದರಿಂದಾಗಿ ನಿರಂತರವಾಗಿ ಇವುಗಳ ಸಂತಾನವೃದ್ಧಿ ಕಾಲವು ಬದಲಾಗುತ್ತಲೇ ಇರಲು ಕಾರಣವಾಗುತ್ತದೆ. ಈ ಹಕ್ಕಿಗಳ ವಿಭಿನ್ನ ವಿತರಣೆಯಂತೆ ಇವುಗಳ ಆವಾಸಸ್ಥಾನಗಳು ಕೂಡ ವೈವಿಧ್ಯಮಯವಾಗಿವೆ. ಹುಲ್ಲುಗಾವಲುಗಳಿಂದ ಹಿಡಿದು, ಒಣ ಪ್ರದೇಶಗಳು, ಹಾಗೂ ಕಾಡು ಪ್ರದೇಶಗಳು ಮತ್ತು ಅರೆ ಮರುಭೂಮಿಗಳವರೆಗೆ ಎಲ್ಲಾ ರೀತಿಯ ಆವಾಸಸ್ಥಾನಗಳಲ್ಲಿ ವಾಸಿಸುತ್ತವೆ. ಹೆಚ್ಚಾಗಿ ಇವುಗಳನ್ನು ಜಲಮೂಲಗಳಲ್ಲಿ ಹಾಗೂ ಶುಷ್ಕ ಪ್ರದೇಶಗಳ ಬಳಿ ಕಾಣಬಹುದು. ಕಪ್ಪು ಗಾಳಿಪಟಗಳು ಮಾನವ-ಪ್ರಾಬಲ್ಯದ ಸ್ಥಳಗಳಿಗೆ ಕೂಡ ಬಹಳ ಚೆನ್ನಾಗಿ ಹೊಂದಿಕೊಂಡಿವೆ ಹಾಗೆಯೇ ಅದರ ಜೊತೆಗೆ ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಕೂಡ ಕಂಡುಬರುತ್ತವೆ.
ಈ ಪಕ್ಷಿಗಳು ಸುಮಾರು 44-66 ಸೆಂ.ಮೀ ಉದ್ದವಾಗಿರುತ್ತವೆ. ಅವು ಸ್ವಲ್ಪ ಕವಲೊಡೆದ ಕಂದು ಬಾಲವನ್ನು ಹೊಂದಿದ್ದು ಕೆಂಪು - ಕಂದು ಬಣ್ಣದ ಹಕ್ಕಿಗಳಾಗಿವೆ, ಆದರೆ ಇವುಗಳ ಉಪಜಾತಿಗಳು ಕೊಕ್ಕಿನ ಬಣ್ಣ ಮತ್ತು ಪುಕ್ಕಗಳ ಬಣ್ಣಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಇವುಗಳು ಸಾಮಾನ್ಯವಾಗಿ ಮರಗಳ ಮೇಲೆ ಒಂಟಿಯಾಗಿ ಜೀವಿಸುವ ಜೀವಿಗಳು, ಅಥವಾ ಹತ್ತು ಜೋಡಿಗಳವರೆಗೆ ಇರುವ ಸಣ್ಣ ಗುಂಪುಗಳನ್ನು ಕೂಡ ರಚಿಸಬಹುದು. ಇವುಗಳು ಪ್ರತಿ ವರ್ಷವೂ ತಮ್ಮ ಗೂಡಿನ ತಾಣಗಳನ್ನು ಕೂಡ ಮರುಬಳಕೆ ಮಾಡುತ್ತವೆ. ಕಪ್ಪು ಗಾಳಿಪಟಗಳು ಸಂತಾನೋತ್ಪತ್ತಿ ಹಾಗೂ ಗೂಡು ಕಟ್ಟುವ ಸಮಯವನ್ನು ಹೊರತು ಪಡಿಸಿಯೂ ಕೂಡ ಗದ್ದಲದ ಪಕ್ಷಿಗಳು. ಅವುಗಳ ದೀರ್ಘವಾದ ಕೀರಲು ಧ್ವನಿಯಿಂದ ಅವುಗಳನ್ನು ಗುರುತಿಸಬಹುದು.
ಇವು ನೈಸರ್ಗಿಕವಾಗಿ ಸಣ್ಣ ದಂಶಕಗಳು, ಬಾವಲಿಗಳು, ಹಲ್ಲಿಗಳು, ಉಭಯಚರಗಳು, ಕೀಟಗಳು ಮತ್ತು ಮೀನುಗಳಂತಹ ಜೀವಂತ ಪ್ರಾಣಿಗಳನ್ನು ಬೇಟೆಯಾಡುತ್ತವೆ, ಆದರೆ ಅವು ಮಾನವ ವಸಾಹತುಗಳಿಗೆ ಒಗ್ಗಿಕೊಂಡಿರುವ ಕಾರಣದಿಂದ ಮೀನುಗಾರಿಕೆ ತೊಟ್ಟಿಗಳ ಹಾಗೂ ಕಸದ ತೊಟ್ಟಿಗಳಿಂದ ಸಿಗುವ ಪ್ರಾಣಿಗಳ ಅವಶೇಷಗಳನ್ನು ಸಹ ತಿನ್ನುತ್ತವೆ. ಈ ಹೆಚ್ಚಾಗಿ ಹೊಂದಿಕೊಳ್ಳುವ ಪಕ್ಷಿಗಳು ಬೆಂಗಳೂರಿನ ಆಕಾಶದಲ್ಲಿ ಸುತ್ತುತ್ತಾ ಮತ್ತು ಮೇಲೇರುತ್ತಾ ಇರುವುದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.
ನೇರಳೆ - ಬಣ್ಣದ ಸೂರಕ್ಕಿ (ಲೆಪ್ಟೋಕೋಮಾ ಝೆಲೋನಿಕಾ )
ಗಂಡು ನೇರಳೆ - ಬಣ್ಣದ ಸೂರಕ್ಕಿ (Image courtesy: Anton Croos /Creative Commons License/Wikimedia Commons)
ಭಾರತೀಯ ಉಪಖಂಡದಲ್ಲಿ ಸಾಮಾನ್ಯವಾಗಿ ಎಲ್ಲಾ ಕಡೆಯೂ ಕಂಡುಬರುವ ಒಂದು ಸೂರಕ್ಕಿ ಎಂದರೆ ಅದು ನೇರಳೆ - ಬಣ್ಣದ ಸೂರಕ್ಕಿ ಆಗಿದೆ. ಇವು ಚಿಕ್ಕ ಹಕ್ಕಿಗಳು, ಸುಮಾರು 10 ಸೆಂ.ಮೀ ಉದ್ದವಿರುತ್ತವೆ ಅಷ್ಟೆ ಹಾಗೆಯೇ ಗಂಡು ಹಕ್ಕಿಗಳು ಮತ್ತು ಹೆಣ್ಣುಗಳು ಪರಸ್ಪರ ಭಿನ್ನವಾಗಿ ಕಾಣುತ್ತವೆ. ಗಂಡು ಹಕ್ಕಿಗಳು ಲೋಹೀಯ ಹಸಿರು ಕಿರೀಟ ಹಾಗೂ ಭುಜಗಳು ಮತ್ತು ಲೋಹೀಯ ಕೆನ್ನೇರಳೆ ಗಂಟಲು ಹೊಂದಿರುವ ಗಾಢ ಕಂದು ಹಾಗೂ ಕೆಂಪು ಮಿಶ್ರಿತ ಮೇಲ್ಮೈಯನ್ನು ಹೊಂದಿರುತ್ತವೆ. ಮತ್ತೊಂದೆಡೆ, ಹೆಣ್ಣು ಹಕ್ಕಿಗಳು ಗಂಡು ಹಕ್ಕಿಗಳಷ್ಟು ಹೊಳೆಯುವ ಬಣ್ಣಗಳನ್ನು ಹೊಂದಿರುವುದಿಲ್ಲ, ಬದಲಾಗಿ ಕಂದು ಬಣ್ಣದ ಮೇಲ್ಮೈ ಮತ್ತು ಬಿಳಿಯ ಗಂಟಲು ಮತ್ತು ಪಾರ್ಶ್ವಗಳನ್ನು ಹೊಂದಿರುತ್ತವೆ. ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳ ಹೊಟ್ಟೆಯ ಭಾಗವು ನಿಂಬೆ ಬಣ್ಣದ ಹಳದಿಯಾಗಿ ಇರುತ್ತದೆ.
ಅವು ವಿಶೇಷವಾಗಿ ಕಾಡುಗಳ ಅಂಚಿನಲ್ಲಿ ಅಥವಾ ಒಂಟಿ ಮರಗಳು, ಉದ್ಯಾನಗಳಲ್ಲಿ ಕಂಡುಬರುತ್ತವೆ. ಒಂದು ಜಾತಿಯ ಸೂರಕ್ಕಿ ಆಗಿರುವುದರಿಂದ, ಇವು ಹೂವುಗಳಿಂದ ಮಕರಂದವನ್ನು ಹೀರಲು ಹೆಸರುವಾಸಿಯಾಗಿವೆ, ಆದರೆ ಅವು ಕೀಟಗಳು ಮತ್ತು ಜೇಡಗಳನ್ನು ಕೂಡ ಈ ಹಕ್ಕಿಗಳು ತಿನ್ನುತ್ತವೆ. ಹಣ್ಣುಗಳಲ್ಲಿ, ಅವರು ದ್ರಾಕ್ಷಿ ಹಾಗೂ ಬಂದಳಿಕೆ ಹಣ್ಣುಗಳನ್ನು ಸೇವಿಸುತ್ತವೆ. ಈ ಸೂರಕ್ಕಿಗಳು ಆಹಾರವನ್ನು ಹುಡುಕುತ್ತಾ ಒಂಟಿಯಾಗಿ ಅಥವಾ ಜೋಡಿಯಾಗಿ ಹೋಗುವುದನ್ನು ಕಾಣಬಹುದು.
ಈ ಪಕ್ಷಿಗಳು ವಿಭಿನ್ನವಾದ ಎತ್ತರದ ಧ್ವನಿಯಲ್ಲಿ ತೀಕ್ಷ್ಣವಾದ ಕೂಗನ್ನು ಹೊಂದಿವೆ. ಭಾರತದಲ್ಲಿ ಇವು ವರ್ಷವಿಡೀ ಮೊಟ್ಟೆಗಳನ್ನು ಇಡುತ್ತವೆ, ಜೊತೆಗೆ ಇವುಗಳಲ್ಲಿ ಗಂಡು ಹಕ್ಕಿಗಳು ಹೆಣ್ಣಿಗೆ ಗೂಡು ಕಟ್ಟಲು ಸಹಾಯ ಮಾಡುತ್ತವೆ. ಇವುಗಳು ಮರಗಳಲ್ಲಿ ಮತ್ತು ಕಟ್ಟಡಗಳ ಒಳಗೆ ಕೂಡ ಅಂಡಾಕಾರದ ಗೂಡುಗಳನ್ನು ನಿರ್ಮಿಸುತ್ತವೆ.
ಅನೌಷ್ಕಾ ದಾಸ್‌ಗುಪ್ತ ಅವರು ಸ್ವತಂತ್ರ ವಿಜ್ಞಾನ ಬರಹಗಾರರಾಗಿದ್ದು, ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಬಿಹೇವಿಯರಲ್ ಇಕಾಲಜಿ ವಿಜ್ಞಾನದಲ್ಲಿ ಹಾಗೂ ಪರಿಸರ ಸಂರಕ್ಷಣೆಯ ವಿಷಯದಲ್ಲಿ ಉತ್ಸಾಹವನ್ನು ಹೊಂದಿದ್ದಾರೆ. ಅವರ ಕೆಲಸವು "ದಿ ವೈರ್", "ದಿ ಪ್ರಿಂಟ್" ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿದೆ.
ಕನ್ನಡ ಅನುವಾದ - ಅದಿತಿ ರಾವ್
ಕನ್ನಡ ವಿಷಯ ವಿಮರ್ಶೆ - ಸವಿತಾ ಕುಮಾರ್
Comments